ADVERTISEMENT

ಕುವೈತ್‌ಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ: ಸಚಿವೆ ವೀಣಾ ಜಾರ್ಜ್

ಪಿಟಿಐ
Published 14 ಜೂನ್ 2024, 3:30 IST
Last Updated 14 ಜೂನ್ 2024, 3:30 IST
   

ಕೊಚ್ಚಿ: ಕುವೈತ್‌ಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಂತ್ರಸ್ತರಾದ ಕೇರಳ ಮೂಲದ ನಾಗರಿಕರಿಗೆ ಸೂಕ್ತ ನೆರವು ನೀಡುವುದು ಭೇಟಿಯ ಉದ್ದೇಶವಾಗಿತ್ತು. ಹಾಗಾಗಿ ಅಲ್ಲಿಗೆ (ಕುವೈತ್‌) ಪ್ರಯಾಣಿಸಲು ಅನುಮತಿ ಕೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕುವೈತ್‌ನ ಕಟ್ಟಡವೊಂದರಲ್ಲಿ ಬುಧವಾರ ಭಾರಿ ಅಗ್ನಿ ದುರಂತ ಸಂಭವಿಸಿದೆ. ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕಟ್ಟಡದಲ್ಲಿ ಒಂದೇ ಕಂಪನಿಯ 195 ಮಂದಿ ಕೆಲಸಗಾರರು ವಾಸಿಸುತ್ತಿದ್ದರು. ಅವಘಡದಲ್ಲಿ 49 ಮಂದಿ ಮೃತಪಟ್ಟಿದ್ದು, ಅವರಲ್ಲಿ 45 ಮಂದಿ ಭಾರತೀಯರು ಸೇರಿದ್ದಾರೆ. ಈ ಪೈಕಿ 23 ಮಂದಿ ಕೇರಳದವರು.

ಗಾಯಾಳುಗಳಿಗೆ ಚಿಕಿತ್ಸೆ, ಮೃತರ ಸ್ವದೇಶಕ್ಕೆ ಕರೆತರುವುದು ಸೇರಿದಂತೆ ಪರಿಹಾರ ಕಾರ್ಯಗಳಿಗೆ ನೆರವಾಗಲು ಜಾರ್ಜ್ ಅವರನ್ನು ಕುವೈತ್‌ಗೆ ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.