ನವದೆಹಲಿ: ಅಂಗವಿಕಲ ಮಕ್ಕಳ ಆರೈಕೆಗಾಗಿ ಆ ಮಕ್ಕಳ ತಾಯಂದಿರಿಗೆ ರಜೆ ನಿರಾಕರಿಸುವುದು ಕೆಲಸದ ಸ್ಥಳದಲ್ಲಿ ಮಹಿಳೆಯ ಸಮಾನ ಪಾಲ್ಗೊಳ್ಳುವಿಕೆಯ ಸಂವಿಧಾನದತ್ತವಾದ ಆಧ್ಯಾದೇಶದ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರತಿಪಾದಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ. ಜೆ.ಬಿ. ಪಾರ್ದಿವಾಲಾ ಅವರಿದ್ದ ಪೀಠವು, ಮಕ್ಕಳ ತಾಯಂದಿರಿಗೆ ರಜೆ ನೀಡುವುದು ಅವರಿಗೆ ವಿಶೇಷ ಹಕ್ಕು ನೀಡಿದಂತೆ ಅಲ್ಲ. ಬದಲಿಗೆ ಅದು ಅವರಿಗಿರುವ ಸಾಂವಿಧಾನಿಕ ಹಕ್ಕು. ಮಕ್ಕಳ ಆರೈಕೆ ರಜೆಗಳು ಮಹಿಳೆಯರಿಗೆ ಸಾಂವಿಧಾನಿಕವಾಗಿ ನೀಡಿದ ಪ್ರಮುಖ ಅಂಶಗಳಾಗಿದ್ದು, ಅವುಗಳ ನಿರಾಕರಣೆಯು ಕೆಲಸದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಸಂವಿಧಾನದ ಕರ್ತವ್ಯದ ಉಲ್ಲಂಘನೆಯಾಗಲಿದೆ ಎಂದು ಹೇಳಿದೆ.
ಮಗುವಿನ ಆರೈಕೆಗೆ ಮಹಿಳೆಗೆ ರಜೆ ನೀಡುವಿರಾ? ಅಥವಾ ಕಾಯಿಲೆಪೀಡಿತವಾದ ಮಗುವಿನ ಆರೈಕೆಗಾಗಿ ಆ ಮಹಿಳೆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಬೇಕೆ ಎಂಬ ಪ್ರಶ್ನೆಗೆ ಉತ್ತರಿಸುವಂತೆ ಹಿಮಾಚಲಪ್ರದೇಶ ಸರ್ಕಾರದ ವಕೀಲರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಇದಕ್ಕೆ ಉತ್ತರಿಸಲು ಸಮಯಾವಕಾಶ ನೀಡುವಂತೆ ಸರ್ಕಾರದ ಪರ ವಕೀಲರು ಕೋರಿದರು.
ಮಗುವಿನ ಚಿಕಿತ್ಸೆಗಾಗಿ ಅರ್ಜಿದಾರ ಮಹಿಳೆಗೆ ಸರ್ಕಾರ ನೀಡಿದ್ದ ಎಲ್ಲ ರಜೆಗಳು ಖಾಲಿಯಾಗಿವೆ. ಇದಲ್ಲದೆ, 1972ರ ಕೇಂದ್ರೀಯ ನಾಗರಿಕ ಸೇವೆ (ರಜೆ) 43 ಸಿ ಅಡಿ ಅಂಗವಿಕಲ ಮಕ್ಕಳು 22 ವರ್ಷ ಆಗುವವರೆಗೆ ಅವರ ಆರೈಕೆಗೆ ಮಹಿಳಾ ಸಿಬ್ಬಂದಿಗೆ ರಜೆ ನೀಡಲು ಅವಕಾಶವಿದೆ. ಆದರೆ, ಈ ನಿಯಮವನ್ನು ಹಿಮಾಚಲ ಪ್ರದೇಶ ಸರ್ಕಾರ ಅಳವಡಿಸಿಕೊಂಡಿಲ್ಲ. ಆದರೆ, ಈ ಅರ್ಜಿಯು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹೀಗಾಗಿ ಇಂಥ ಪ್ರಕರಣದಲ್ಲಿ ಮಹಿಳಾ ಸಿಬ್ಬಂದಿಯ ರಜೆ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ಸರ್ಕಾರ ಪರಿಗಣಿಸಬೇಕು. ಅಲ್ಲದೆ, ಈ ಬಗ್ಗೆ ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂದು ಹಿಮಾಚಲಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಏನಿದು ಪ್ರಕರಣ: ಅನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ 14 ವರ್ಷದ ಮಗುವಿನ ಚಿಕಿತ್ಸೆಗಾಗಿ ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ಕಾಲೇಜಿನ ಭೂಗೋಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಶಾಲಿನಿ ಧರ್ಮಾಂಜಿ ಎಂಬುವರು ರಜೆ ಕೋರಿದ್ದರು. ಆದರೆ, 1972ರ ಕೇಂದ್ರೀಯ ನಾಗರಿಕ ಸೇವೆ (ರಜೆ)ಯ ನಿಯಮಗಳಡಿ ಶಾಲಿನಿ ಅವರ ರಜೆಯ ಕೋರಿಕೆಯನ್ನು ಹಿಮಾಚಲ ಪ್ರದೇಶದ ಹೈಕೋರ್ಟ್ ವಜಾಗೊಳಿಸಿತ್ತು. ಇದರ ವಿರುದ್ಧ ಶಾಲಿನಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.