ADVERTISEMENT

21 ದಿನಗಳ ‘ಫರ್ಲೊ’ ಮೇಲೆ ಗುರ್ಮೀತ್‌ ರಾಮ್ ರಹೀಮ್ ಬಿಡುಗಡೆ

ಪಿಟಿಐ
Published 13 ಆಗಸ್ಟ್ 2024, 12:45 IST
Last Updated 13 ಆಗಸ್ಟ್ 2024, 12:45 IST
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌
ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌   

ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್ ಸಿಂಗ್‌ ಅವರು 21 ದಿನಗಳ ‘ಫರ್ಲೊ( ದೀರ್ಘಾವಧಿ ಜೈಲು ಶಿಕ್ಷೆಗೆ ಒಳಾಗಾಗಿರುವವರಿಗೆ ತಾತ್ಕಾಲಿಕ ಬಿಡುಗಡೆ) ಮೇಲೆ ಹರಿಯಾಣದ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ.

ತಾತ್ಕಾಲಿಕ ಬಿಡುಗಡೆ ಅವಧಿಯನ್ನು ಗುರ್ಮೀತ್‌ ಅವರು ಉತ್ತರಪ್ರದೇಶದ ಬರ್ನಾವದಲ್ಲಿರುವ ಡೇರಾ ಆಶ್ರಮದಲ್ಲಿ ಕಳೆಯಲಿದ್ದಾರೆ.

ಗುರ್ಮಿತ್‌ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲು ಮುಂದಾಗಿರುವುದನ್ನು ಪ್ರಶ್ನಿಸಿ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ (ಎಸ್‌ಜಿಪಿಸಿ) ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ವಜಾಗೊಳಿಸಿದೆ. 

ADVERTISEMENT

‘ಬಿಡುಗಡೆ ಅವಧಿಯಲ್ಲಿ ಗುರ್ಮೀತ್‌ ಅವರು ಡೇರಾ ಆಶ್ರಮದಲ್ಲಿಯೇ ಇರಬೇಕು. ವಾರಂಟ್‌ನಲ್ಲಿ ಉಲ್ಲೇಖವಾಗದ ಸ್ಥಳಗಳಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅನುಮತಿಯಿಲ್ಲದೇ ತೆರಳುವಂತಿಲ್ಲ’ ಎಂದು ಕೋರ್ಟ್‌ ಸೂಚಿಸಿದೆ.

ಸಿರ್ಸಾ ಆಶ್ರಮದಲ್ಲಿ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಗುರ್‌ಮೀತ್‌ ಅವರಿಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. 

ಗುರ್ಮೀತ್‌ ಈ ಹಿಂದೆಯೂ ಹಲವು ಬಾರಿ ‘ಫರ್ಲೊ’ ಅಥವಾ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ‘ನ್ಯಾಯಾಲಯದ ಅನುಮತಿಯಿಲ್ಲದೇ ಗುರ್ಮೀತ್‌ ಅವರಿಗೆ ಇನ್ನು ಮುಂದೆ ಪೆರೋಲ್ ನೀಡುವಂತಿಲ್ಲ’ ಎಂದು ಹೈಕೋರ್ಟ್‌ ಫೆಬ್ರವರಿ 29ರಂದು ಹರಿಯಾಣ ಸರ್ಕಾರಕ್ಕೆ ಆದೇಶಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.