ಕೊಚ್ಚಿ(ಕೇರಳ): ಗಣರಾಜ್ಯೋತ್ಸವದ ಅಂಗವಾಗಿ ಹೈಕೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಕೇರಳ ಹೈಕೋರ್ಟ್ ತನ್ನ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಓರ್ವ ಸಹಾಯಕ ರಿಜಿಸ್ಟ್ರಾರ್ (ಉನ್ನತ ದರ್ಜೆ) ಹಾಗೂ ಮತ್ತೊಬ್ಬ ಕೋರ್ಟ್ ಕೀಪರ್ (ಉನ್ನತ ದರ್ಜೆ)ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಹೇಳಿದ್ದಾರೆ.
ಇಬ್ಬರು ಅಧಿಕಾರಿಗಳಿಗೆ ನೀಡಲಾದ ಗುರುತಿನ ಚೀಟಿ ಸೇರಿದಂತೆ ಅವರ ಬಳಿ ಇರುವ ಎಲ್ಲಾ ಸರ್ಕಾರಿ ಆಸ್ತಿಗಳನ್ನು ವಾಪಸ್ ನೀಡುವಂತೆ ಸೂಚಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ .
ಅಲ್ಲದೇ ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿ ಆದಷ್ಟು ಶೀಘ್ರ ವರದಿ ಸಲ್ಲಿಸುವಂತೆಯೂ ಮುಖ್ಯ ನ್ಯಾಯಮೂರ್ತಿ ರಿಜಿಸ್ಟ್ರಾರ್ (ವಿಜಿಲೆನ್ಸ್) ಅವರಿಗೆ ಸೂಚಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಮಾನತಿನ ಅವಧಿಯಲ್ಲಿ, ಇಬ್ಬರಿಗೆ ಜೀವನಾಧಾರ ಭತ್ಯೆ ಹಾಗೂ ಸಂಬಂಧಿತ ನಿಯಮಗಳ ಪ್ರಕಾರ ಸ್ವೀಕಾರಾರ್ಹವಾದ ಇತರ ಭತ್ಯೆಗಳನ್ನು ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.