ADVERTISEMENT

ಭಾರತ ಘೋಷಿತ ಉಗ್ರ 'ದಲ್ಲಾ' ಕೆನಡಾದಲ್ಲಿ ಬಂಧನ?

ಪಿಟಿಐ
Published 10 ನವೆಂಬರ್ 2024, 16:07 IST
Last Updated 10 ನವೆಂಬರ್ 2024, 16:07 IST
-
-   

ನವದೆಹಲಿ: ಭಾರತವು ‘ಘೋಷಿತ ಉಗ್ರ’ ಎಂದು ಸಾರಿರುವ ಅರ್ಶ್‌ದೀಪ ಸಿಂಗ್‌ ಗಿಲ್‌ ಅಲಿಯಾಸ್ ಅರ್ಶ್‌ ದಲ್ಲಾ ಹಾಗೂ ಮತ್ತೊಬ್ಬನನ್ನು ಕೆನಡಾದಲ್ಲಿ ನಡೆದ ಶೂಟಿಂಗ್‌ ನಂತರ ಬಂಧಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ಭಾನುವಾರ ಹೇಳಿವೆ.

ಈ ಘಟನೆಯು ಒಂಟಾರಿಯೊ ಪ್ರಾಂತ್ಯದ ಮಿಲ್ಟನ್‌ನಲ್ಲಿ ಅಕ್ಟೋಬರ್ 28ರಂದು ನಡೆದಿದೆ. ದಲ್ಲಾ, ನಿಷೇಧಿತ ಖಾಲಿಸ್ತಾನ ಟೈಗರ್‌ ಫೋರ್ಸ್‌ನೊಂದಿಗೆ (ಕೆಟಿಎಫ್‌) ನಂಟು ಹೊಂದಿದ್ದಾನೆ ಎಂದು ಹೇಳಿವೆ.

‘ಬಂದೂಕಿನಿಂದ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದ’ ಆರೋಪದ ಮೇಲೆ 25 ವರ್ಷದ ಹಾಲ್ಟನ್‌ ಹಿಲ್ಸ್‌ ನಿವಾಸಿ ಹಾಗೂ 28 ವರ್ಷದ ಸರ‍್ರೆ ಬಿ.ಸಿ ನಿವಾಸಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಹಾಲ್ಟನ್‌ ಪ್ರಾದೇಶಿಕ ಪೊಲೀಸ್‌ ಸೇವೆಗಳ (ಎಚ್‌ಆರ್‌ಪಿಎಸ್) ಅಧಿಕಾರಿಗಳು ಅಕ್ಟೋಬರ್‌ 29ರಂದು ಹೇಳಿದ್ದರು.

ADVERTISEMENT

‘ಈ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಒಬ್ಬಾತನಿಗೆ ಗುಂಡೇಟು ತಗುಲಿತ್ತು. ಚಿಕಿತ್ಸೆ ನೀಡಿದ ನಂತರ ಇಬ್ಬರನ್ನೂ ಮನೆಗೆ ಕಳುಹಿಸಲಾಗಿತ್ತು. ಗುಂಡು ಹಾರಿಸಿದ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದಾರೆ’ ಎಂದು ಎಚ್‌ಆರ್‌ಪಿಎಸ್ ಅಧಿಕಾರಿಗಳು ಹೇಳಿದ್ದಾರೆ.

ಕೆನಡಾ ಪೊಲೀಸರು ಬಂಧಿತರಿಬ್ಬರ ಗುರುತನ್ನು ಬಹಿರಂಗಪಡಿಸಿಲ್ಲ. ಅವರ ಜಾಮೀನು ಅರ್ಜಿ ವಿಚಾರಣೆ ಬಾಕಿ ಇದ್ದು, ಇಬ್ಬರೂ ಕಸ್ಟಡಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

‘ಕೆನಡಾ ಪೊಲೀಸರು ಬಂಧಿಸಿರುವ ಇಬ್ಬರ ಪೈಕಿ ಒಬ್ಬಾತ ಅರ್ಶ್ ದಲ್ಲಾ ಎಂದು ನಂಬಲಾಗಿದೆ. ಈತ,  ಕಳೆದ ವರ್ಷ ಹತ್ಯೆಯಾದ ಮತ್ತೊಬ್ಬ ಘೋಷಿತ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್ ಪರವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ’ ಎಂದು ಇಲ್ಲಿನ ಮೂಲಗಳು ಹೇಳಿವೆ.

ದಲ್ಲಾ ವಿರುದ್ಧದ ಆರೋಪಗಳು:

ಗಡಿ ಮೂಲಕ ನಡೆಯುತ್ತಿದ್ದ ಮಾದಕವಸ್ತುಗಳು ಹಾಗೂ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಅರ್ಶ್‌ ದಲ್ಲಾ ಪಾತ್ರ ಇದೆ ಎಂದು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಹೇಳಿದೆ.

ನಿರ್ದಿಷ್ಟ ವ್ಯಕ್ತಿಗಳ ಹತ್ಯೆ, ಉಗ್ರರಿಗೆ ಹಣಕಾಸು ನೆರವು ನೀಡುವುದಕ್ಕಾಗಿ ಸುಲಿಗೆ, ಕೋಮು ಸೌಹಾರ್ದ ಕದಡಲು ಯತ್ನ ಸೇರಿದಂತೆ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಎನ್‌ಐಎ ತನಿಖೆ ನಡೆಸುತ್ತಿದೆ. 

ದಲ್ಲಾ ಗ್ಯಾಂಗ್‌ನ ಇಬ್ಬರು ಶೂಟರ್‌ಗಳ ಬಂಧನ

ಚಂಡೀಗಡ: ಕೆನಡಾ ಮೂಲದ ಗ್ಯಾಂಗ್‌ಸ್ಟರ್‌ ಹಾಗೂ ಉಗ್ರ ಅರ್ಶ್‌ ದಲ್ಲಾ ಗ್ಯಾಂಗ್‌ನ ಇಬ್ಬರು ಶೂಟರ್‌ಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬರ್ನಾಲದ ಭದೋರ‍್ಹ ನಿವಾಸಿ ಅನ್ಮೋಲ್‌ಪ್ರೀತ್ ಸಿಂಗ್‌ ಅಲಿಯಾಸ್‌ ವಿಶಾಲ್ ಹಾಗೂ ಖರಾರ್‌ ನಿವಾಸಿ ನವಜೋತ್‌ ಸಿಂಗ್‌ ಅಲಿಯಾಸ್‌ ನೀತು ಬಂಧಿತರು. ಕಳೆದ ತಿಂಗಳು ನಡೆದಿದ್ದ ಸಿಖ್‌ ಹೋರಾಟಗಾರ ಗುರ್ಪ್ರೀತ್ ಸಿಂಗ್‌ ಹರಿ ನೌ ಅಲಿಯಾಸ್‌ ಭೋದಿ ಅವರ ಹತ್ಯೆಯಲ್ಲಿ ಈ ಇಬ್ಬರೂ ಭಾಗಿಯಾಗಿದ್ದರು ಎಂಬ ಆರೋಪದಡಿ ಬಂಧಿಸಲಾಗಿದೆ ಎಂದು ಡಿಜಿಪಿ ಗೌರವ ಯಾದವ್‌ ತಿಳಿಸಿದ್ದಾರೆ.

ರಾಜ್ಯದ ಗೂಂಡಾ ನಿಗ್ರಹ ಕಾರ್ಯಪಡೆಯ ವಿಶೇಷ ಕಾರ್ಯಾಚರಣೆ ಘಟಕ ಹಾಗೂ ಫರೀದ್‌ಕೋಟ್‌ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ ಎಂದು ಯಾದವ್‌ ತಿಳಿಸಿದ್ದಾರೆ.  ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇತ್ತೀಚೆಗೆ ನಡೆದಿದ್ದ ವ್ಯಕ್ತಿಯ ಕೊಲೆಯಲ್ಲಿ ಬಂಧಿತರ ಪಾತ್ರ ಇದೆ ಎಂದು ಆರೋಪಿಸಲಾಗಿದೆ. ‘ದುಷ್ಕೃತ್ಯಗಳಲ್ಲಿ ನೆರವು ನೀಡಿದ ಆರೋಪದಡಿ ಬಂಧಿತರ ಸಹಚರನೂ ಆದ ನವಜೋತ್‌ ಸಿಂಗ್‌ ಸಹೋದರ ಬಲ್ವೀರ್‌ ಸಿಂಗ್‌ ಅಲಿಯಾಸ್‌ ಕಾಲು ಎಂಬಾತನನ್ನು ಬಂಧಿಸಲಾಗಿದೆ’ ಫರೀದ್‌ಕೋಟ್‌ನ ಎಸ್‌ಪಿ ಪ್ರಗ್ಯಾ ಜೈನ್‌ ತಿಳಿಸಿದ್ದಾರೆ.

‘ಬಂಧಿತರಿಂದ ಎರಡು ಅತ್ಯಾಧುನಿಕ ಪಿಸ್ತೂಲ್‌ಗಳು ಹಾಗೂ ಏಳು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. ‘ಸಿಖ್‌ ಹೋರಾಟಗಾರ ಗುರ್ಪ್ರೀತ್ ಸಿಂಗ್‌ ಹರಿ ನೌ ಅವರು ‘ಹರಿ ನೌ ಟಾಕ್ಸ್‌’ ಎಂಬ ಯೂಟ್ಯೂಬ್‌ ಚಾನೆಲ್‌ ನಡೆಸುತ್ತಿದ್ದರು. ಇವರು ಅಕ್ಟೋಬರ್‌ 9ರಂದು ತಮ್ಮ ಗ್ರಾಮದಿಂದ ಬೈಕ್‌ನಲ್ಲಿ ವಾಪಸಾಗುತ್ತಿದ್ದ ವೇಳೆ ಫರೀದ್‌ಕೋಟ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಅರ್ಶ್ ದಲ್ಲಾ ಹರಿ ನೌ ಅವರ ಹತ್ಯೆಯ ಸಂಚು ರೂಪಿಸಿದ್ದ. ಹರಿ ನೌ ಅವರನ್ನು ಹತ್ಯೆಗೈಯುವ ಹೊಣೆಯನ್ನು ನವಜೋತ್‌ಸಿಂಗ್‌ಗೆ ವಹಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಸ್‌ಪಿ ಜೈನ್‌ ತಿಳಿಸಿದ್ದಾರೆ.

‘ಹರಿ ನೌ ಅವರ ಹತ್ಯೆ ನಂತರ ಆರೋಪಿಗಳು ಅಡಗಿಕೊಳ್ಳಲು ಅರ್ಶ್‌ ದಲ್ಲಾ ವ್ಯವಸ್ಥೆ ಮಾಡಿದ್ದ ಎಂಬುದು ಸಹ ತನಿಖೆಯಿಂದ ಗೊತ್ತಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ‘ಬಂಧಿತರು ಹಲವರನ್ನು ಗುರಿಯಾಗಿಸಿ ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು. ಇಬ್ಬರ ಬಂಧನದಿಂದಾಗಿ ಕೆಲ ನಗರಗಳಲ್ಲಿ ನಡೆಯಲಿದ್ದ ಕನಿಷ್ಠ ನಾಲ್ವರು ಪ್ರಮುಖ ವ್ಯಕ್ತಿಗಳ ಹತ್ಯೆಯನ್ನು ತಪ್ಪಿಸಿದಂತಾಗಿದೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.