ADVERTISEMENT

ಮಸೂದ್ ಅಜರ್, ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂಗೆ 'ಉಗ್ರ' ಹಣೆಪಟ್ಟಿ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 12:16 IST
Last Updated 4 ಸೆಪ್ಟೆಂಬರ್ 2019, 12:16 IST
   

ನವದೆಹಲಿ: ಪುಲ್ವಾಮ ದಾಳಿಯ ರೂವಾರಿ ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್, ಲಷ್ಕರೆ ಸಂಘಟನೆಯ ಹಫೀಜ್ ಸಯೀದ್ ಮತ್ತು ಝಾಕಿ ಉರ್ ರೆಹಮಾನ್ ಲಖ್ವಿ, ಭೂಗತ ದೊರೆ ಮತ್ತು1993 ಮುಂಬೈ ಬಾಂಬ್ ದಾಳಿಯ ಸಂಚುಕೋರ ದಾವೂದ್ ಇಬ್ರಾಹಿಂನ್ನು ಕೇಂದ್ರ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ.

ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಇಟ್ಟುಕೊಂಡ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶ ಕಲ್ಪಿಸುವ, ಭಯೋತ್ಪಾದನೆ ವಿರೋಧಿ ಮಸೂದೆಯನ್ನುಜುಲೈ ತಿಂಗಳಲ್ಲಿ ಲೋಕಸಭೆ ಅಂಗೀಕರಿಸಿತ್ತು. ಈ ಮಸೂದೆ ಪ್ರಕಾರ ಅಜರ್, ಸಯೀದ್ ಮತ್ತು ಇಬ್ರಾಹಿಂಗೆ ಉಗ್ರ ಹಣೆಪಟ್ಟಿ ನೀಡಲಾಗಿದೆ.

ADVERTISEMENT

ಅಜರ್, ಸಯೀದ್ ಮತ್ತು ಲಖ್ವಿ ಪಾಕಿಸ್ತಾನಿಗಳಾಗಿದ್ದು, ಭಾರತೀಯನಾದ ದಾವೂದ್ ಈಗ ಪಾಕಿಸ್ತಾನದಲ್ಲಿದ್ದಾನೆ ಎಂದು ಹೇಳಲಾಗುತ್ತಿದೆ.

ಜೈಷ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ದಾಳಿ ಮತ್ತು ಪುಲ್ವಾಮ ಉಗ್ರ ದಾಳಿಯ ರೂವಾರಿ ಆಗಿದ್ದಾನೆ. ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್‌‌ನಲ್ಲಿರುವ ಜೈಷ್ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. 2019 ಮೇ 1ರಂದು ವಿಶ್ವಸಂಸ್ಥೆ ಅಜರ್‌ನ್ನು ಜಾಗತಿಕ ಉಗ್ರ ಎಂದು ಘೋಷಿಸಿತ್ತು.

1994ರಲ್ಲಿ ಕಾಶ್ಮೀರದ ಅನಂತನಾಗ್‌ನಲ್ಲಿ ಅಜರ್‌ನ್ನು ಬಂಧಿಸಲಾಗಿತ್ತು. ಆದರೆ 1999 ಡಿಸೆಂಬರ್‌ನಲ್ಲಿ ಭಾರತಗ ವಿಮಾನ IC814ನ್ನು ಅಪಹರಿಸಿದಾಗ ಅಜರ್‌ನ್ನು ಬಿಡುಗಡೆ ಮಾಡಬೇಕೆಂದು ಅಪಹರಣಕಾರರು ಬೇಡಿಕೆಯೊಡ್ಡಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿದ್ದ ಅಪಹರಣಕಾರರ ಒತ್ತಾಯಕ್ಕೆ ಮಣಿದು ಸರ್ಕಾರ ಅಜರ್‌ನ್ನು ಬಿಡುಗಡೆ ಮಾಡಿತ್ತು.

ಎನ್ಎಐಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಸಯೀದ್ 2008 ಮುಂಬೈ ಉಗ್ರ ದಾಳಿಯ ರೂವಾರಿ. ಲಷ್ಕರ್–ಇ–ತೊಯ್ಬಾ ಸಂಘಟನೆಯ ಉಗ್ರರು ಈ ದಾಳಿ ನಡೆಸಿದ್ದು ಇದರಲ್ಲಿ 174 ಮಂದಿ ಸಾವಿಗೀಡಾಗಿದ್ದು 300ಕ್ಕಿಂತಲೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು.

ಭಾರತ ಸೇರಿದಂತೆ ಅಮೆರಿಕ, ಬ್ರಿಟನ್, ಯುರೋಪಿಯನ್ ಒಕ್ಕೂಟ, ರಷ್ಯಾ ಮತ್ತು ಆಸ್ಟ್ರೇಲಿಯಾ ಸಯೀದ್‌ ನೇತೃತ್ವದ ಲಷ್ಕರ್ ಮತ್ತು,ಜಮಾತ್-ಉ- ದವಾ ಸಂಘಟನೆಯನ್ನು ನಿಷೇಧಿಸಿದೆ.
ದಾವೂದ್ ಇಬ್ರಾಹಿಂ ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದ್ದು1993 ಮುಂಬೈ ಬಾಂಬ್ ದಾಳಿಯ ರೂವಾರಿ ಆಗಿದ್ದಾನೆ. ಈ ಬಾಂಬ್ ದಾಳಿಯಲ್ಲಿ 300 ಮಂದಿ ಸಾವಿಗೀಡಾಗಿದ್ದರು. 2010ರಿಂದ ಜಗತ್ತಿನ 10 ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿರುವ ದಾವೂದ್‌ನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.