ಪತ್ತನಂತಿಟ್ಟಾ (ಕೇರಳ): ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಕೋವಿಡ್ ಪಿಡುಗಿನ ನಡುವೆಯೂ ಸಾವಿರಾರು ಭಕ್ತರು ಮಂಗಳವಾರ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಇದರೊಂದಿಗೆ ಎರಡು ತಿಂಗಳ ಕಾಲ ನಡೆಯುವ ಮಂಡಳಂ–ಮಕರವಿಲಕ್ಕು ವಾರ್ಷಿಕ ಧಾರ್ಮಿಕ ಯಾತ್ರೆಗೆ ಚಾಲನೆ ಸಿಕ್ಕಂತಾಗಿದೆ.
ಶಬರಿಮಲೆ ಕ್ಷೇತ್ರದ ಮುಖ್ಯ ಅರ್ಚಕ ಎನ್. ಪರಮೇಶ್ವರನ್ ನಂಬೂದಿರಿ ಮಂಗಳವಾರ ಮುಂಜಾನೆ ದೇವಾಲಯದ ಬಾಗಿಲು ತೆರೆದು ಗರ್ಭಗುಡಿಯಲ್ಲಿ ದೀಪವನ್ನು ಬೆಳಗಿಸಿದ ನಂತರ, ಭಕ್ತರಿಗೆ ಬೆಟ್ಟದ ತಪ್ಪಲಿನಿಂದ ಯಾತ್ರೆಗೆ ಅವಕಾಶ ನೀಡಲಾಯಿತು.
ಕೋವಿಡ್ ಮತ್ತು ಭಾರಿ ಮಳೆಯ ಕಾರಣ ಯಾತ್ರಾರ್ಥಿಗಳನ್ನು ನಿಯಂತ್ರಿಸುವುದಕ್ಕಾಗಿ ಹಿಂದಿನ ವರ್ಷದಂತೆ ಈ ಬಾರಿಯೂ ವರ್ಚುವಲ್ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ಮುಂದಿನ ಮೂರ್ನಾಲ್ಕು ದಿನ ಭಕ್ತರ ಭೇಟಿಗೆ ಮಿತಿ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಪಂಪಾ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿರುವುದರಿಂದ ನದಿಯಲ್ಲಿ ಸ್ನಾನ ಮಾಡಲು ಯಾರಿಗೂ ಅವಕಾಶ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.