ADVERTISEMENT

ಬಂಧನ ‘ಗೃಹ’ ಸಿದ್ಧ, ಯಾರಿಗೆ ‘ಪ್ರವೇಶ’?

ಬೆಂಗಳೂರು ಹೊರವಲಯದ ಸೊಂಡೆಕೊಪ್ಪದಲ್ಲಿ 30 ಮಂದಿಗೆ ಸಕಲ ಸೌಲಭ್ಯ ಇರುವ ಕೇಂದ್ರ ಅಣಿ

ಎಂ.ಜಿ.ಬಾಲಕೃಷ್ಣ
Published 28 ಡಿಸೆಂಬರ್ 2019, 1:37 IST
Last Updated 28 ಡಿಸೆಂಬರ್ 2019, 1:37 IST
ಸೊಂಡೆಕೊಪ್ಪ ನಿರಾಶ್ರಿತರ ಕೇಂದ್ರ ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.
ಸೊಂಡೆಕೊಪ್ಪ ನಿರಾಶ್ರಿತರ ಕೇಂದ್ರ ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.   

ಬೆಂಗಳೂರು: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ರಾಜ್ಯದಲ್ಲಿ ನಡೆಯಲಿದೆಯೇ, ಇಲ್ಲವೇ ಎಂಬ ಗೊಂದಲ ಮುಂದುವರಿದಿರುವಂತೆಯೇ ನಗರದ ಹೊರವಲಯದಸೊಂಡೆಕೊಪ್ಪದಲ್ಲಿ ‘ಗೃಹ’ ಬಂಧನ ಕೇಂದ್ರ ಸಜ್ಜಾಗಿಬಿಟ್ಟಿದೆ.

ಒಂದು ಕಾಲಕ್ಕೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮಕ್ಕಳ ಕಲರವದ ಕೇಂದ್ರವಾಗಿದ್ದ ಇದು ಅಕ್ರಮವಲಸಿಗರ ಬಂಧನ ಕೇಂದ್ರವಾಗಿ ಮಾರ್ಪಾಟಾಗುವುದಕ್ಕೆ ಸಜ್ಜಾಗಿದೆ. ಅದರೊಳಗೆ ಯಾರನ್ನು ತಳ್ಳಲಾಗುತ್ತದೆ ಎಂಬುದು ಮಾತ್ರ ನಿಗೂಢವಾಗಿದೆ.

ಬೆಂಗಳೂರು–ಮಾಗಡಿ ರಸ್ತೆಯ ತಾವರೆಕೆರೆಯಿಂದ ಆರು ಕಿ.ಮೀ.ದೂರದಲ್ಲಿ ಮುಖ್ಯ ರಸ್ತೆಯ ಬದಿಯಲ್ಲೇ ಸೀಬೆ, ಅಡಿಕೆ, ರಾಗಿ ತೋಟದ
ನಡುವೆ 10 ಅಡಿ ಎತ್ತರದ ಕಾಂಪೌಂಡ್‌ ಗೋಡೆ, ಅದರ ಮೇಲೆ ರಕ್ಷಣಾ ತಂತಿ ಬೇಲಿ, ಜತೆಗೊಂದು ವೀಕ್ಷಣಾ ಗೋಪುರ, ಅಲ್ಲಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ. ತಪ್ಪಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ, ಕೇವಲ 20 ಗುಂಟೆ ಜಾಗದಲ್ಲಿ ಭದ್ರ ಕೋಟೆಯಂತಿರುವ ಇಲ್ಲಿ ಈಗಾಗಲೇ ಪೊಲೀಸ್‌ ಸರ್ಪಗಾವಲು ಆರಂಭವಾಗಿದೆ.

ADVERTISEMENT

ನೆಲಕ್ಕೆ ಹಾಸಿದ ಗ್ರಾನೈಟ್‌, ಮೂರು ಕೊಠಡಿಗಳಲ್ಲಿ ತಲಾ 5ರಂತೆ ಹೊಸ ಮಂಚಗಳು, ಅದರ ಮೇಲೆ ಬೆಡ್‌, ಸುಸಜ್ಜಿತ ಅಡುಗೆ ಮನೆ, ಊಟದ ಮನೆ, ತರಕಾರಿ ಸಂಗ್ರಹಿಸಿ ಇಡಲು ಕೋಣೆ, ಗೀಸರ್‌ ಅಳವಡಿಸಿದ4 ಸ್ನಾನಗೃಹಗಳು, 3 ಶೌಚಾಲಯಗಳು, 5 ಮೂತ್ರ ವಿಸರ್ಜನಾ ಕಮೋಡ್‌ಗಳು, ಅಧಿಕಾರಿಗಳು, ಸಿಬ್ಬಂದಿಗಾಗಿ ಎರಡು ಪ್ರತ್ಯೇಕ ಕೊಠಡಿಗಳು, ಶೌಚಾಲಯ, ಕೊಳವೆ ಬಾವಿಯಿಂದ 24 ಗಂಟೆಯೂ ನೀರು, ಬೃಹತ್ ಸಂಪು, 2 ಸಾವಿರ ಲೀಟರ್‌ನ ಚಾವಣಿ ಮೇಲಿನ ನೀರಿನ ಟ್ಯಾಂಕ್‌, ಸೋಲಾರ್‌ ವ್ಯವಸ್ಥೆ, ವಿದ್ಯುತ್‌ ಕೈಕೊಟ್ಟರೆ ಯುಪಿಎಸ್‌ ಸೌಲಭ್ಯ... ಬಂಧಿತರಿಗೆ ಇಷ್ಟೆಲ್ಲ ಸೌಲಭ್ಯ ಇದೆ.

‘ಇದು ಶಾಶ್ವತ ಗೃಹಬಂಧನ ಸ್ಥಳವಲ್ಲ, ಆಫ್ರಿಕಾ ಖಂಡ ಸಹಿತ ಹಲವು ದೇಶಗಳಿಂದ ನಗರಕ್ಕೆ ಬಂದು, ವೀಸಾ ಅವಧಿ ಮುಗಿದ ಬಳಿಕವೂ ಇಲ್ಲೇ ಉಳಿದುಕೊಂಡಿರುವವರು ತಮ್ಮ ದೇಶಕ್ಕೆ ಹಿಂದಿರುಗುವ ತನಕ ವಾಸ್ತವ್ಯ ಕಲ್ಪಿಸುವ ನೆಲೆ ಮಾತ್ರ ಇದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದು ಬಿಟ್ಟರೆ ಬೇರೆ ಮಾಹಿತಿ ಇಲ್ಲ.

‘ಇಲ್ಲಿನವರಿಗೆ ಊಟ, ವಸತಿ, ಇತರ ಸೌಲಭ್ಯ ನೀಡುವುದಷ್ಟೇ ಸಮಾಜ ಕಲ್ಯಾಣ ಇಲಾಖೆಯ ಕೆಲಸ. ಯಾರನ್ನು ಕರೆತರುತ್ತಾರೆ, ಅವರು ಎಷ್ಟು ದಿನ ಇರುತ್ತಾರೆ ಎಂಬಂತಹ ಮಾಹಿತಿಗಳು ನಮಗೆ ತಿಳಿದಿರುವುದಿಲ್ಲ. ಸದ್ಯ 30 ಮಂದಿಗಷ್ಟೇ ಇಲ್ಲಿ ವ್ಯವಸ್ಥೆ ಮಾಡಬಹುದು. ಇನ್ನೂ ಎರಡು ಕೊಠಡಿ ನಿರ್ಮಿಸಿ 50ರಿಂದ 75ರಷ್ಟು ಮಂದಿಗೆ ಇಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬಹುದಷ್ಟೇ’ ಎಂದು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರೀಯ ಪರಿಹಾರ ಸಮಿತಿಯ ಕಾರ್ಯದರ್ಶಿ ಯು.ಚಂದ್ರ ನಾಯ್ಕ್‌ ತಿಳಿಸಿದರು.

ಎನ್‌ಆರ್‌ಸಿ ಗೊಂದಲ:ರಾಷ್ಟ್ರೀಯ ಪೌರತ್ವ ನೋಂದಣಿಯಂತೆ (ಎನ್‌ಆರ್‌ಸಿ) ಅಕ್ರಮ ವಾಸಿಗಳೆಂದು ಗುರುತಿಸಿಕೊಂಡವರ ಬಂಧನ ಕೇಂದ್ರ ಇದು ಎಂದು ಕೆಲವು ತಿಂಗಳ ಹಿಂದೆ ಗೃಹ ಸಚಿವರು ಹೇಳಿದ್ದರು. ಹೈಕೋರ್ಟ್‌ಗೆ ಅಧಿಕಾರಿಗಳು ನೀಡಿದ ಪ್ರಮಾಣಪತ್ರದಲ್ಲೂ ಇದನ್ನೇ ತಿಳಿಸಲಾಗಿತ್ತು.

ಆದರೆ ಅಸ್ಸಾಂ ಬಿಟ್ಟು ಬೇರೆಡೆ ಎನ್‌ಆರ್‌ಸಿಗೆ ನಿರ್ಧಾರ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಬಳಿಕ ಇಲ್ಲಿನ ಚಿತ್ರಣವೂ ಬದಲಾಗಿದೆ. ವೀಸಾ ಅವಧಿ ಮುಗಿದ ಸಮಾಜ ಕಂಟಕರನ್ನುಬಂಧಿಸಿ ಇಡುವ ತಾಣ ಇದು ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದೆ. ‘ಬೇರೆ ದೇಶಗಳ ಸಮಾಜ ಕಂಟಕರನ್ನು ಇಲ್ಲಿ ಬಹಳ ದಿನ ಇಟ್ಟುಕೊಳ್ಳುವುದು ಅಪಾಯಕಾರಿ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇಬ್ಬರು ಅಡುಗೆಯವರು: ಬಂಧನ ಕೇಂದ್ರದಲ್ಲಿ ಇಬ್ಬರು ಅಡುಗೆಯವರು, ಇಬ್ಬರು ಸಹಾಯಕರು, ಒಬ್ಬರು ಶುಚಿಗೊಳಿಸುವ ಸಿಬ್ಬಂದಿಯನ್ನು ಈಗಾಗಲೇ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಮೇಲುಸ್ತುವಾರಿ ನೋಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯಿಂದ ಒಬ್ಬರ ನಿಯೋಜನೆ ಆಗಿದ್ದು, ಇನ್ನೊಬ್ಬರು ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.