ADVERTISEMENT

ಬಂಧನ ಕೇಂದ್ರ: ಮಿಥ್ಯೆಯೋ ಸತ್ಯವೋ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 1:39 IST
Last Updated 28 ಡಿಸೆಂಬರ್ 2019, 1:39 IST
ಬಂಧನ ಕೇಂದ್ರ
ಬಂಧನ ಕೇಂದ್ರ   

ದೇಶದೊಳಕ್ಕೆ ನುಸುಳಿ ಬಂದ ‘ಅಕ್ರಮ ವಲಸಿಗ’ರಿಗಾಗಿ ಬಂಧನ ಕೇಂದ್ರಗಳು ನಿರ್ಮಾಣವಾಗುತ್ತಿವೆಯೇ? ಪೌರತ್ವ (ತಿದ್ದುಪಡಿ) ಕಾಯ್ದೆಗೆ ರಾಷ್ಟ್ರಪತಿ ಅಂಗೀಕಾರ, ರಾಷ್ಟ್ರೀಯ ಪೌರತ್ವ ನೋಂದಣಿ ದೇಶದಾದ್ಯಂತ ಜಾರಿ ಪ್ರಸ್ತಾವದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಬಂಧನ ಕೇಂದ್ರಗಳ ವಿಚಾರವೂ ಮುನ್ನೆಲೆಗೆ ಬಂದಿದೆ.

ದೇಶದಲ್ಲಿ ಬಂಧನ ಕೇಂದ್ರಗಳು ಇಲ್ಲವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರವೇ (ಡಿ. 23) ಸ್ಪಷ್ಟಪಡಿಸಿದ್ದರು. ಇದರ ವಿರುದ್ಧ ತಕ್ಷಣವೇ ಪ್ರತಿಕ್ರಿಯೆ ಬಂದಿತ್ತು. ‘ಆರ್‌ಎಸ್‌ಎಸ್‌ ಪ್ರಧಾನಿ ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದರು. ಈ ವಿಚಾರದಲ್ಲಿ ಏಟು ಎದುರೇಟು ಮುಂದುವರಿದಿದೆ.

1999ರಿಂದ 2004ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವೇ ಬಂಧನ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿತ್ತು ಎಂದು ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೊಯಿ ಶುಕ್ರವಾರ ಹೇಳಿದ್ದಾರೆ ಎಂದು ವರದಿಯಾಗಿದೆ. 2001ರಿಂದ 2016ರವರೆಗೆ ಗೊಗೊಯಿ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿದ್ದರು.

ADVERTISEMENT

‘ನನ್ನ ನೇತೃತ್ವದಸರ್ಕಾರವು ಬಂಧನ ಕೇಂದ್ರಗಳನ್ನು ನಿರ್ಮಿಸಿತ್ತು. ಗುವಾಹಟಿ ಹೈಕೋರ್ಟ್‌ ಆದೇಶದಂತೆ ಈ ಕೆಲಸ ಆಗಿತ್ತು. ‘ಘೋಷಿತ ವಿದೇಶಿ’ಯರನ್ನು ಇರಿಸುವುದಕ್ಕಾಗಿ ಈ ಬಂಧನ ಕೇಂದ್ರಗಳ ನಿರ್ಮಾಣವಾಗಿತ್ತು. ಆದರೆ, ಈಗ ಮೋದಿ ಅವರು ಮುಖ ಉಳಿಸಿಕೊಳ್ಳುವುದಕ್ಕಾಗಿ ಬಂಧನ ಕೇಂದ್ರವೇ ಇಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಗೊಗೊಯಿ ನೆನಪಿಸಿಕೊಂಡಿದ್ದಾರೆ.

ಬಂಧನ ಕೇಂದ್ರಗಳ ನಿರ್ಮಾಣದ ಪ್ರಸ್ತಾವ ಬಹಳ ಹಿಂದೆಯೇ ಇತ್ತು. ಅದರ ಪ್ರಕ್ರಿಯೆಯೂ ಆರಂಭವಾಗಿತ್ತು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ಹೇಳಿದ್ದಾರೆ. ಅಕ್ರಮ ವಲಸೆಯ ಆರೋಪ ಹೊತ್ತವರು ಮತ್ತು ವೀಸಾ ನಿಯಮ ಉಲ್ಲಂಘಿಸುವವರಿಗಾಗಿ ಪ್ರತಿ ರಾಜ್ಯದಲ್ಲಿಯೂ ಬಂಧನ ಕೇಂದ್ರಗಳು ಇರಬೇಕು ಎಂದು ಹೇಳಲಾಗಿತ್ತು ಎಂದಿದ್ದಾರೆ.

2012ರಲ್ಲಿಯೇ ಈ ಸೂಚನೆ ಕೇಂದ್ರದಿಂದ ಬಂದಿತ್ತು. ಆಗ ಕೇರಳದಲ್ಲಿ ಇದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಬಂಧನ ಕೇಂದ್ರ ನಿರ್ಮಾಣದ ಹೊಣೆಯನ್ನು ಸಾಮಾಜಿಕ ನ್ಯಾಯ ಇಲಾಖೆಗೆ ವಹಿಸಿತ್ತು. ಹಾಗಿದ್ದರೂ ಯಾವುದೇ ಕೆಲಸ ಆಗಿಲ್ಲ. ತಮ್ಮ ಸರ್ಕಾರವು ಈ ಕೆಲಸವನ್ನು ಅಮಾನತಿನಲ್ಲಿ ಇಡಲು ನಿರ್ಧರಿಸಿದೆ ಎಂದು ವಿಜಯನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.