ಆಲಿಗಡ(ಉತ್ತರ ಪ್ರದೇಶ): ‘ಅಭಿವೃದ್ಧಿ ಕಾರ್ಯಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು‘ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯು) ಶತಮಾನೋತ್ಸವ ಸಮಾರಂಭದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ‘ರಾಜಕಾರಣ ಕಾಯಬಹುದು ಆದರೆ, ಅಭಿವೃದ್ಧಿ ಕಾರ್ಯಗಳು ಕಾಯುವುದಿಲ್ಲ‘ ಎಂದರು.
‘ಇತ್ತೀಚೆಗೆ ಎಲ್ಲೆಡೆ ನಕಾರಾತ್ಮಕ ಸುದ್ದಿಗಳನ್ನು ಹಂಚುವಂತಹ ಜನರು ಕಾಣುತ್ತಿದ್ದಾರೆ‘ ಎಂದು ಹೇಳಿದ ಮೋದಿಯವರು, ತಮ್ಮ ಹೇಳಿಕೆಯನ್ನು ಹೆಚ್ಚು ವಿಸ್ತರಿಸಲಿಲ್ಲ. ಜತೆಗೆ, ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ಆದರೆ, ಪ್ರಧಾನಿಯವರು ಕೃಷಿ ಮಸೂದೆಗಳನ್ನು ವಿರೋಧಿಸಿ ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಮಾತು ಹೇಳಿರಬಹುದು ಎಂದು ಅಂದಾಜಿಸಲಾಗಿದೆ.
ನವ ಭಾರತದ ನಿರ್ಮಾಣಕ್ಕೆ ಒಂದು ಸಾಮಾನ್ಯ ವೇದಿಕೆ ಅಗತ್ಯವಿತ್ತು. ಆ ಅಗತ್ಯವನ್ನು ‘ಆತ್ಮನಿರ್ಭರ ಭಾರತ‘ ಪೂರೈಸುತ್ತಿದೆ‘ ಎಂದು ಹೇಳಿದ ಮೋದಿಯವರು, ‘ಕೆಲವು ವರ್ಷಗಳಿಂದ ಮುಸ್ಲಿಂ ಸಮುದಾಯದಲ್ಲಿ ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಒಂದು ಸಮಾಧಾನದ ಸಂಗತಿ‘ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ತ್ರಿವಳಿ ತಲಾಖ್‌ನ ದುಷ್ಕೃತ್ಯ ಕೊನೆಗೊಂಡಿದೆ‘ ಎಂದು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ’ಶತಮಾನದಲ್ಲಿ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ಸಾಧನೆಗಳು ಮತ್ತು ವಿವಿಧ ಹಂತಗಳಲ್ಲಿ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವಿದ್ಯಾಲಯದ ಶತಮಾನೋತ್ಸವದ ನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
1964ರಲ್ಲಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಂತರ ಈ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದ್ದು ಇದೇ ಮೊದಲು. ಐದು ದಶಕಗಳ ನಂತರ ಪ್ರಧಾನಿಯೊಬ್ಬರು ಈ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿ ಜವಾಹರಲಾಲ್ ನೆಹರು ಅವರು 1948ರಲ್ಲಿ ಮೊದಲಬಾರಿಗೆ ಎಎಂಯುಗೆ ಭೇಟಿ ನೀಡಿದ್ದರು. ನಂತರ ಇಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಆಮೇಲೆ 1955, 1960 ಮತ್ತು 1963 ರಲ್ಲಿ ಈ ಕ್ಯಾಂಪಸ್‌ಗೆ ಅವರು ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.