ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು 100 ಜನ್ಮ ಎತ್ತಿದರೂ ಕೂಡ ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಎಂದು ಶಿವಸೇನಾದ (ಯುಟಿಬಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
‘ಶರದ್ ಪವಾರ್ ಅವರು ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನವೇ ಸಿಎಂ ಹುದ್ದೆಗೆ ಮೂರ್ನಾಲ್ಕು ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ. ಆದರೆ, ಆ ಪಟ್ಟಿಯಲ್ಲಿ ಉದ್ಧವ್ ಠಾಕ್ರೆ ಹೆಸರಿಲ್ಲ’ ಎಂದು ದೇವೇಂದ್ರ ಫಡಣವೀಸ್ ಈಚೆಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಂಜಯ್ ರಾವುತ್ ಅವರು ಫಡಣವೀಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
‘2019ರಲ್ಲಿ ಶರದ್ ಪವಾರ್ ಅವರು ಏನು ಯೋಚಿಸಿದ್ದರು ಎಂಬುದು ಫಡಣವೀಸ್‌ಗೆ ತಿಳಿದಿದೆಯೇ?, ಫಡಣವೀಸ್ 100 ಜನ್ಮ ಎತ್ತಿದರೂ ಪವಾರ್ ಮನಸ್ಸನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ರಾಜ್ಯದಲ್ಲಿ ಆಡಳಿತ ಪಕ್ಷದವರಿಗೆ (ಬಿಜೆಪಿಗರಿಗೆ) ಧೈರ್ಯವಿದ್ದರೆ ಚುನಾವಣೆಗೆ ಕರೆ ನೀಡಬೇಕು’ ಎಂದು ರಾವುತ್ ಕಿಡಿಕಾರಿದ್ದಾರೆ.
‘ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳನ್ನು ಮುನ್ನಡೆಸುವ ಕುಟುಂಬಗಳ ನಡುವೆ ಒಡಕು ಮೂಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಆಶಿಶ್ ಶೇಲಾರ್ ಅವರು ಸಫಲರಾಗಿದ್ದಾರೆ’ ಎಂದು ರಾವುತ್ ಆರೋಪಿಸಿದ್ದಾರೆ.
2019ರ ರಾಜ್ಯ ಚುನಾವಣೆಯ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಶರದ್ ಪವಾರ್ ಅವರು ವಿರೋಧ ಪಕ್ಷಗಳ ‘ಮಹಾ ವಿಕಾಸ್ ಅಘಾಡಿ’ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ‘ಮಹಾ ವಿಕಾಸ್ ಅಘಾಡಿ’ಯ ಭಾಗವಾಗಿರುವ ಕಾಂಗ್ರೆಸ್, ಶಿವಸೇನಾ (ಯುಬಿಟಿ), ಎನ್‌ಸಿಪಿ (ಎಸ್‌ಪಿ) ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಚುನಾವಣೆಗೂ ಮುನ್ನ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವಂತೆ ಉದ್ಧವ್ ಠಾಕ್ರೆ ಅವರು ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ನಾಯಕರನ್ನು ಒತ್ತಾಯಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಶರದ್ ಪವಾರ್, ‘ಚುನಾವಣೆಯ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಸೂಕ್ತ. ಮೈತ್ರಿ ಪಕ್ಷಗಳ ಪೈಕಿ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆಯೋ ಆ ಪಕ್ಷದವರು ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.