ಮುಂಬೈ: ಕಳೆದೊಂದು ತಿಂಗಳಿಂದಲೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ನಡೆಯುತ್ತಿದ್ದ ಕಸರತ್ತಿಗೆ ತೆರೆ ಬಿದ್ದಂತಾಗಿದೆ. ಎರಡನೇ ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಎನ್‌ಸಿಪಿಯೊಂದಿಗಿನ ಮೈತ್ರಿ ಬಳಿಕ ರಚನೆಯಾದ ನಂತರ ರಾಜ್ಯದಲ್ಲಿ ಸ್ಥಿರ ಸರ್ಕಾರವನ್ನು ನೀಡುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರಕ್ಕಾಗಿ ನಿರ್ಧಾರ ತೆಗೆದುಕೊಂಡ ಮತ್ತು ಬಿಜೆಪಿಯೊಂದಿಗೆ ಒಟ್ಟಾಗಿ ಬಂದಿದ್ದಕ್ಕೆ ಎನ್‌ಸಿಪಿಯ ಅಜಿತ್ ಪವಾರ್ ಜೀ ಅವರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇನ್ನೂ ಕೆಲವು ನಾಯಕರು ನಮ್ಮೊಂದಿಗೆ ಬಂದಿದ್ದಾರೆ.ನಂತರ ನಾವುರಾಜ್ಯಪಾಲರಿಗೆ ಸರ್ಕಾರ ರಚಿಸುವ ಹಕ್ಕು ಮಂಡನೆ ಮಾಡಿದೆವು ಎಂದು ಹೇಳಿದರು.
ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳಲು ಮನವಿ ಮಾಡಿದರು ಮತ್ತು ಸರ್ಕಾರ ರಚನೆಗೆ ನಮಗೆ ಆಹ್ವಾನ ನೀಡಿದರು. ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ನೀಡುತ್ತೇವೆ ಎನ್ನುವ ನಂಬಿಕೆ ನನಗಿದೆ ಎಂದು ತಿಳಿಸಿದ್ದಾರೆ.
ಶಿವಸೇನಾವನ್ನು ಟೀಕಿಸಿದ ಅವರು, ರಾಜ್ಯದ ಜನರು ಸ್ಪಷ್ಟ ತೀರ್ಪನ್ನು ರವಾನಿಸಿದರು ಕೂಡ ಶಿವಸೇನಾ ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲು ಪ್ರಯತ್ನಿಸಿತು. ಇದರ ಪರಿಣಾಮವಾಗಿಯೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಯ್ತು. ಇದು ರಾಜ್ಯಕ್ಕೆ ಒಳ್ಳೆಯದಲ್ಲ. ಈ ಕಾರಣಕ್ಕಾಗಿಯೇ ರಾಜ್ಯಕ್ಕೆ ಸ್ಥಿರ ಸರ್ಕಾರ ಬೇಕೇ ಹೊರತು ಕಿಚಡಿ ಸರ್ಕಾರವಲ್ಲ ಎಂದು ದೂರಿದರು.
ಮತ್ತೆ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಕಾರಿ ಅಧ್ಯಕ್ಷ ಜೆ.ಪಿ, ನಡ್ಡಾ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 145 ಸದಸ್ಯ ಬಲ ಅಗತ್ಯವಿತ್ತು. 105 ಸ್ಥಾನಗಳಲ್ಲಿ ವಿಜಯ ಸಾಧಿಸಿದ ಬಿಜೆಪಿಯು 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿದೆ. ಬಿಜೆಪಿ ಮೈತ್ರಿ ಪಕ್ಷವಾಗಿದ್ದ ಶಿವಸೇನಾ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 44 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.