ಮುಂಬೈ:ಸರ್ಕಾರ ರಚನೆಗೆ ಇರುವ ಗಡುವು ಸುಮಾರು 72 ಗಂಟೆಗಳಷ್ಟೇ ಬಾಕಿಯಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಾಗಪುರದಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕ (ಮುಖ್ಯಸ್ಥ) ಮೋಹನ್ ಭಾಗವತ್ ಅವರನ್ನು ಭೇಟಿಯಾದರು.
ಕಳೆದ ವಾರವಷ್ಟೇ ಶಿವಸೇನೆ ನಾಯಕರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಸರ್ಕಾರ ರಚನೆಯ ಬಿಕ್ಕಟ್ಟು ಪರಿಹರಿಸಲು ನೆರವಾಗುವಂತೆ ಕೋರಿದ್ದರು. ಮೈತ್ರಿ ಧರ್ಮ ಪಾಲನೆಗೆ ಬಿಜೆಪಿ ಗಮನ ನೀಡದ ಹಿನ್ನೆಲೆಯಲ್ಲಿ ತಮ್ಮ ಮಧ್ಯಪ್ರವೇಶ ಅನಿವಾರ್ಯ ಎಂದು ಶಿವಸೇನೆ ಹೇಳಿತ್ತು.
ಈ ಹಿನ್ನೆಲೆಯಲ್ಲಿ ದೇವೇಂದ್ರ ಫಡಣವೀಸ್ ಅವರ ನಾಗಪುರ ಭೇಟಿ ಮಹತ್ವ ಪಡೆದುಕೊಂಡಿದೆ.
ಅಕ್ಟೋಬರ್ 24ರಂದು ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಸರ್ಕಾರ ರಚನೆ ವಿಚಾರವಾಗಿ ಬಿಜೆಪಿ ಮತ್ತು ಶಿವಸೇನೆಯ ನಡುವೆ ಹಗ್ಗಜಗ್ಗಾಟ ಆರಂಭವಾಗಿತ್ತು. ಶಿವಸೇನೆ ಅಧಿಕಾರದಲ್ಲಿ ಸಮಪಾಲು ಅಪೇಕ್ಷಿಸಿತ್ತು. ಮುಖ್ಯಮಂತ್ರಿ ಹುದ್ದೆಯನ್ನು ಸಮಾನ ಅವಧಿಗೆ ಹಂಚಿಕೆ ಮಾಡಬೇಕು. ಸಚಿವ ಸ್ಥಾನದಲ್ಲಿ ಅರ್ಧದಷ್ಟು ಪಾಲು ಬೇಕು ಎಂದು ಶಿವಸೇನೆ ಕೇಳಿತ್ತು. ಬಿಜೆಪಿ ಈ ಬೇಡಿಕೆಗಳಿಗೆ ಸೊಪ್ಪು ಹಾಕಿರಲಿಲ್ಲ. ಯಾರೊಬ್ಬರೂ ರಾಜಿಗೆ ಮುಂದಾಗದ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಕಗ್ಗಂಟಾಗಿತ್ತು.
ರೈತರ ಹಕ್ಕುಗಳ ಹೋರಾಟಗಾರ ಕಿಶೋರ್ ತಿವಾರಿ, ನಿತಿನ್ ಗಡ್ಕರಿ ಅವರನ್ನು ಮಾತುಕತೆಯಲ್ಲಿ ಪಾತ್ರ ವಹಿಸಲು ಸೂಚಿಸಬೇಕು ಎಂದು ಕೋರಿದ್ದರು. ಈ ಕೋರಿಕೆಯನ್ನು ಮನ್ನಿಸುವಂತೆ ಫಡಣವೀಸ್ ನಿನ್ನೆಯಷ್ಟೇ ದೆಹಲಿಯಲ್ಲಿ ಅಮಿತ್ ಶಾ ಭೇಟಿಯ ನಂತರ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಚರ್ಚೆ ನಡೆಸಿದ್ದರು.
ಮಾತುಕತೆಗೆ ನಮ್ಮ ಬಾಗಿಲು ದಿನದ 24 ಗಂಟೆಯೂ ಮುಕ್ತವಾಗಿ ತೆರೆದಿರುತ್ತೆ. ಅಧಿಕಾರ ಹಂಚಿಕೆಯ ಒಂದು ಸೂತ್ರ ರೂಪಿಸಿಕೊಳ್ಳೋಣ. ಆದರೆ ಬಿಜೆಪಿಯೇ ದೇವೇಂದ್ರ ಫಡಣವೀಸ್ ನೇತೃತ್ವದಲ್ಲಿ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ನಿನ್ನೆ ಹೇಳಿತ್ತು.
ಉದ್ಧವ್ ಠಾಕ್ರೆ ಅವರ ಮನೆಗೆ ಹೋಗಿ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿರುವ ದೇವೇಂದ್ರ ಫಡಣವೀಸ್ ಅವರ ಆಪ್ತ ಗಿರೀಶ್ ಮಹಾಜನ್, ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಉಳಿದೆಲ್ಲ ವಿಚಾರಗಳ ಬಗ್ಗೆ ಶಿವಸೇನೆಯೊಂದಿಗೆ ಮುಕ್ತಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.