ADVERTISEMENT

ದೇವೇಂದ್ರ ಫಡಣವೀಸ್: ಕಾರ್ಪೊರೇಟರ್ ಗಾದಿಯಿಂದ ಸಿ.ಎಂ. ಹಾದಿಯವರೆಗೆ...

ನಾನು ಆಧುನಿಕ ಅಭಿಮನ್ಯು; ಚಕ್ರವ್ಯೂಹಕ್ಕೆ ನುಗ್ಗೋದೂ ಗೊತ್ತು, ಹೊರಬರಲೂ ಗೊತ್ತು: ದೇವೇಂದ್ರ

ಮೃತ್ಯುಂಜಯ ಬೋಸ್
Published 23 ನವೆಂಬರ್ 2024, 22:14 IST
Last Updated 23 ನವೆಂಬರ್ 2024, 22:14 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ಮುಂಬೈ: ‘ನಾನು ಆಧುನಿಕ ಅಭಿಮನ್ಯು, ಚಕ್ರವ್ಯೂಹದೊಳಗೆ ನುಗ್ಗುವುದಷ್ಟೇ ಅಲ್ಲ; ಹೊರಬರುವುದೂ ನನಗೆ ಗೊತ್ತು’ ಎಂದು ದೇವೇಂದ್ರ ಫಡಣವೀಸ್ ನಗು ತುಳುಕಿಸುತ್ತಾ ಶನಿವಾರ ಹೇಳುವ ಹೊತ್ತಿಗೆ ಬಿಜೆಪಿ ನೇತೃತ್ವದ ಮಹಾಯುತಿ–ಎನ್‌ಡಿಎ ಒಕ್ಕೂಟವು ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರಿ ಮುನ್ನಡೆ ಗಳಿಸಿತ್ತು. 

ಚುನಾವಣೆಯಲ್ಲಿ ತಮ್ಮ ಪಾತ್ರ ಏನಾಗಿತ್ತೆಂದು ಹೇಳಲು ದೇವೇಂದ್ರ ಫಡಣವೀಸ್ ಮಹಾಭಾರತದ ಒಂದು ಎಳೆಯನ್ನು ಎತ್ತಿಕೊಂಡರು. 

‘ನಮ್ಮ ಒಕ್ಕೂಟದವರು, ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ನನ್ನ ಪಾತ್ರ ಸಣ್ಣದಷ್ಟೆ’ ಎಂದು ಅವರು ಪ್ರತಿಕ್ರಿಯಿಸಿದರು. 

ADVERTISEMENT

ಸದ್ಯಕ್ಕೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆಗಿರುವ ಫಡಣವೀಸ್, ಈ ಹಿಂದೆ ಮುಖ್ಯಮಂತ್ರಿಯಾಗಿ ಹಾಗೂ ಅದಕ್ಕೂ ಮೊದಲು ವಿರೋಧ ಪಕ್ಷದ ನಾಯಕರಾಗಿ ಅನುಭವ ಉಳ್ಳವರು. 

ಸಾಮಾನ್ಯ ಕುಟುಂಬವೊಂದರಿಂದ ಬಂದ ಫಡಣವೀಸ್ (54) ರಾಜಕೀಯ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದವರು. ಪುಟಿದೇಳುವುದರಲ್ಲಿ ನಿಸ್ಸೀಮರು ಎಂದೇ ಅವರನ್ನು ಬಣ್ಣಿಸುತ್ತಾರೆ. 

‘ದೇವೇಂದ್ರ’ ಎನ್ನುವುದು ‘ದೇವೇಂದ್ರ ಜೀ’ ಎಂದಾಗಿ, ಅದು ‘ದೇವೇಂದ್ರ ಭಾವೂ’ (ದೇವೇಂದ್ರಣ್ಣ ಎಂಬಂಥ ಧ್ವನಿ) ಎಂದು ಬದಲಾದದ್ದನ್ನು ಕಂಡಿದ್ದೇವೆ. ಸದ್ಯ ಅವರೇ ಮಹಾರಾಷ್ಟ್ರದಲ್ಲಿ ಬಿಜೆಪಿ ಪಾಲಿನ ಕಣ್ಮಣಿ. 

ದೇವೇಂದ್ರ ಅವರದ್ದೇ ಶೈಲಿಯ ಕೆಲವು ನುಡಿಗಟ್ಟುಗಳಿವೆ. ಅವುಗಳಲ್ಲಿ ‘ಮೀ ಪುನಃ ಯೇಇನ್’ (ನಾನು ಮತ್ತೆ ಬರುವೆ) ಎನ್ನುವುದೂ ಒಂದು.  2019ರಲ್ಲಿ ಚುನಾವಣಾ ರ‍್ಯಾಲಿಗಳಲ್ಲಿ ಈ ಮಾತನ್ನು ಪದೇಪದೇ ಹೇಳಿದ್ದರು. ಆಗ ಅವರು ಮುಖ್ಯಮಂತ್ರಿ ಆಗಿದ್ದರು. 

ಬಿಜೆಪಿ ಜತೆಗಿನ ಸಖ್ಯವನ್ನು ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನಾ ಕಡಿದುಕೊಂಡಿದ್ದರಿಂದ, ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬ ಫಡಣವೀಸ್ ಬಯಕೆ ಈಡೇರಲಿಲ್ಲ. 

‘ಮೈ ಸಮಂದರ್ ಹೂಂ, ಲೌಟ್‌ಕರ್‌ ವಾಪಸ್ ಆವೂಂಗಾ’ (ನಾನೊಂದು ಸಮುದ್ರ... ಮರಳಿ ಬರುತ್ತೇನೆ) ಎಂದು ಆಗ ಅವರು ಹೇಳಿದ್ದ ಮಾತು ಜನಪ್ರಿಯವಾಗಿತ್ತು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ‘ಮೀ ಪುನಃ ಯೇಇನ್’ ಎಂಬ ಅವರ ಮಾತಿನ ಕುರಿತು ಗಮನಸೆಳೆದಿದ್ದಾಗ, ‘ಹೌದು, ಎರಡು ಪಕ್ಷಗಳನ್ನು ಒಡೆದ ನಂತರ ನಾನು ಮರಳಿದ್ದೇನೆ’ ಎಂದು ಉತ್ತರಿಸಿದ್ದರು. ಶಿವಸೇನಾ ಹಾಗೂ ಎನ್‌ಸಿಪಿ ಒಡಕನ್ನು ಉಲ್ಲೇಖಿಸಿ ಅವರು ಹಾಗೆ ಹೇಳಿದ್ದರು.

ಲೋಕಸಭಾ ಚುನಾವಣೆ ನಂತರ ಸೋಲಿನ ಹೊಣೆ ಹೊತ್ತು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಫಡಣವೀಸ್ ರಾಜೀನಾಮೆ ನೀಡಲು ಮುಂದಾಗಿದ್ದರು. ಬಿಜೆಪಿ ಹೈಕಮಾಂಡ್ ಅದನ್ನು ನಿರಾಕರಿಸಿತ್ತು. 

ಫಡಣವೀಸ್ ಸುಶಿಕ್ಷಿತ, ಮೃದುಭಾಷಿ, ಮರಾಠರ ಪ್ರಾಬಲ್ಯದ ನೆಲದಲ್ಲಿ ಗಟ್ಟಿಯಾಗಿ ರಾಜಕೀಯ ಬೇರುಬಿಟ್ಟ ಬ್ರಾಹ್ಮಣ. ನಾಗ್ಪುರದವರಾದ ಅವರು ಆರು ಬಾರಿ ಶಾಸಕರಾಗಿ ಅನುಭವ ಪಡೆದಿದ್ದಾರೆ. ಆರ್‌ಎಸ್‌ಎಸ್‌ನ ಭಾರಿ ಬೆಂಬಲ ಅವರಿಗಿದೆ. ತಂದೆ ಗಂಗಾಧರ ರಾವ್ ಫಡಣವೀಸ್ ನಾಗ್ಪುರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ತಾಯಿ ಸರಿತಾ ಫಡಣವೀಸ್ ವಿದರ್ಭಾ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ ಆಗಿದ್ದವರು. 

1970ರಲ್ಲಿ ಹುಟ್ಟಿದ ಫಡಣವೀಸ್ ಕಾನೂನು ಪದವೀಧರ. ಬರ್ಲಿನ್‌ನ ಡಿ.ಎಸ್‌.ಇ.ನಲ್ಲಿ ‘ಮೆಥಡ್ಸ್ ಅಂಡ್ ಟೆಕ್ನಿಕ್ಸ್‌ ಆಫ್ ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌’ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು.  

ನಾಗ್ಪುರ ಕಾರ್ಪೊರೇಟರ್ ಆಗಿ, ಅತಿ ಕಿರಿಯ ವಯಸ್ಸಿನ ಮೇಯರ್ ಎನ್ನುವ ಗೌರವವನ್ನೂ ತಮ್ಮದಾಗಿಸಿಕೊಂಡು ರಾಜಕೀಯ ಬದುಕು ಪ್ರಾರಂಭಿಸಿದ್ದ ಅವರು ಈಗ ಹೊಸ ಇನಿಂಗ್ಸ್ ಒಂದಕ್ಕೆ ಅಣಿಯಾಗುತ್ತಿರುವ ‘ದೇವ ಭಾವೂ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.