ADVERTISEMENT

ಬಾಳ ಠಾಕ್ರೆ ಸ್ಫೂರ್ತಿ ಸೆಲೆ ಎಂದು ಹೊಗಳಿದ ದೇವೇಂದ್ರ ಫಡಣವೀಸ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 6:49 IST
Last Updated 17 ನವೆಂಬರ್ 2019, 6:49 IST
   

ಮುಂಬೈ: ಶಿವಸೇನಾ ಸಂಸ್ಥಾಪಕ ಬಾಳ ಠಾಕ್ರೆ ಸ್ಫೂರ್ತಿಸೆಲೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೊಗಳಿದ್ದಾರೆ.

ಶಿವಸೇನಾ ಮತ್ತು ಬಿಜೆಪಿ ನಡುವೆ ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆಗಳು ಸಫಲಗೊಳ್ಳದೆ ಸಂಬಂಧ ಸಡಿಲವಾಗುತ್ತಿರುವ ಹೊತ್ತಲ್ಲಿ ಫಡಣವೀಸ್ ಭಾನುವಾರ ಈ ರೀತಿ ಟ್ವೀಟಿಸಿದ್ದಾರೆ.

ಠಾಕ್ರೆಯವರ ಭಾಷಣದ ವಿಡಿಯೊವೊಂದನ್ನು ಟ್ವೀಟ್ ಮಾಡಿದ ಫಡಣವೀಸ್, ಠಾಕ್ರೆ ಜನರಿಗೆ ಸ್ವಾಭಿಮಾನವನ್ನು ಹೇಳಿಕೊಟ್ಟವರು . ಹಿಂದೂ ಹೃದಯ್ ಸಾಮ್ರಾಟ್ ಬಾಳ ಠಾಕ್ರೆ ಅವರ ಪುಣ್ಯತಿಥಿಗೆ ನೂರಾರು ನಮನಗಳು ಎಂದಿದ್ದಾರೆ.

ಸೋಮವಾರ ಸಂಸತ್‌ನ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಅದಕ್ಕಿಂತ ಮುನ್ನ ನಡೆಯಲಿರುವ ಆಡಳಿತಾರೂಢ ಎನ್‌ಡಿಎ ಸಭೆಗೆ ಹಾಜರಾಗದಿರಲು ಶಿವಸೇನಾ ನಿರ್ಧರಿಸಿದೆ.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ನಡುವೆ ಸಭೆಗೆ ಹಾಜರಾಗದಿರಲು ನಾವು ನಿರ್ಧರಿಸಿದ್ದೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಶನಿವಾರ ಹೇಳಿದ್ದರು.

ಶರದ್ ಪವಾರ್‌ರ ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚನೆ ಮಾಡಲು ಶಿವಸೇನಾ ಪ್ರಯತ್ನಿಸುತ್ತಿದೆ. ಈ ಮೂರು ಪಕ್ಷಗಳು ಕಳೆದ ಒಂದು ವಾರದಿಂದ ಮಾತುಕತೆ ನಡೆಸುತ್ತಿದ್ದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ರೂಪಿಸುತ್ತಿವೆ.

ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲಿದ್ದು, ಅದು ಪೂರ್ಣಾವಧಿ ಸರ್ಕಾರ ಆಗಿರುತ್ತದೆ ಎಂದು ಶರದ್ ಪವಾರ್ ಹೇಳಿದ್ದರು.

ಏತನ್ಮಧ್ಯೆ ಪವಾರ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಭೆ ಭಾನುವಾರ ನಡೆಯಲು ನಿಗದಿಯಾಗಿದ್ದರೂ ಅದನ್ನು ಆಮೇಲೆ ರದ್ದು ಮಾಡಲಾಯಿತು. ಈ ಸಭೆ ಸೋಮವಾರ ಅಥವಾ ಮಂಗಳವಾರ ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.