ADVERTISEMENT

ಪುರಿ ಜಗನ್ನಾಥ ದೇಗುಲಕ್ಕೆ ಭಕ್ತರೊಬ್ಬರಿಂದ 4 ಕೆಜಿ ಚಿನ್ನ, 3 ಕೆಜಿ ಬೆಳ್ಳಿಯ ಆಭರಣ

ಪಿಟಿಐ
Published 17 ಫೆಬ್ರುವರಿ 2021, 7:52 IST
Last Updated 17 ಫೆಬ್ರುವರಿ 2021, 7:52 IST
ಪುರಿ ಜಗನ್ನಾಥ ದೇವಾಲಯ
ಪುರಿ ಜಗನ್ನಾಥ ದೇವಾಲಯ   

ಭುವನೇಶ್ವರ: ಭಕ್ತರೊಬ್ಬರು ಭಗವಾನ್ ಬಾಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ್ ಜಗನ್ನಾಥ್ ತ್ರಿಮೂರ್ತಿಗಳಿಗೆ 4 ಕೆಜಿ ಚಿನ್ನ ಮತ್ತು 3 ಕೆಜಿ ಬೆಳ್ಳಿಯ ಆಭರಣಗಳನ್ನು ಅರ್ಪಿಸಿದ್ದಾರೆ ಎಂದು ಜಗನ್ನಾಥ ದೇವಾಲಯದ ಆಡಳಿತ (ಎಸ್‌ಜೆಟಿಎ) ತಿಳಿಸಿದೆ.

ಭಕ್ತರ ಪ್ರತಿನಿಧಿಯೊಬ್ಬರು ಎಸ್‌ಜೆಟಿಎ ಮುಖ್ಯ ಆಡಳಿತಾಧಿಕಾರಿ ಕ್ರಿಶನ್ ಕುಮಾರ್ ಅವರನ್ನು ಭೇಟಿಯಾಗಿ ದೇವಾಲಯದ ಕಚೇರಿಯಲ್ಲಿ ಕೆಲವು ನಿರ್ವಹಣಾ ಸಮಿತಿ ಸದಸ್ಯರು ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಮೂಲ್ಯವಾದ ಆಭರಣಗಳನ್ನು ಮಂಗಳವಾರ ಹಸ್ತಾಂತರಿಸಿದರು.

ದೇಣಿಗೆ ನೀಡಿರುವುದಕ್ಕೆ ಪ್ರಚಾರವನ್ನು ಬಯಸದ ಕಾರಣದಿಂದಾಗಿ ಭಕ್ತನು ತನ್ನ ಗುರುತನ್ನು ಬಹಿರಂಗಪಡಿಸದಂತೆ ವಿನಂತಿಸಿರುವುದಾಗಿ ಕ್ರಿಶನ್‌ ಕುಮಾರ್ ತಿಳಿಸಿದ್ದಾರೆ.

ADVERTISEMENT

ಆಭರಣಗಳು 4.858 ಕೆಜಿ ಚಿನ್ನ ಮತ್ತು 3.867 ಕೆಜಿ ಬೆಳ್ಳಿಯಿಂದ ಕೂಡಿದ್ದು, ತ್ರಿಮೂರ್ತಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಭರಣಗಳನ್ನು ವಿಶೇಷ ಪೂಜೆಗಳಲ್ಲಿ ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

12 ನೇ ಶತಮಾನದ ದೇವಾಲಯದ ಮೂರು ದೇವತೆಗಳಿಗೆ ಚಿನ್ನದಲ್ಲಿ ಮಾಡಲಾದ 'ಜೋಬಾ' (ವಿಗ್ರಹದ ಮಧ್ಯ ಭಾಗ ಇಡುವ), 'ಶ್ರೀಮುಖ' (ಮುಖ) ಮತ್ತು 'ಪದ್ಮ' (ಕಮಲ) ರೂಪದಲ್ಲಿರುವ ಆಭರಗಣಗಳು ಅದರಲ್ಲಿದ್ದವು.

ಭಗವಾನ್ ಬಾಲಭದ್ರರಿಗೆ ಒಟ್ಟು 40 'ಶ್ರೀ ಮುಖ ಪದ್ಮ' ಮತ್ತು ಎರಡು 'ಜೋಬಾ' ಆಭರಣಗಳನ್ನು ದಾನ ಮಾಡಲಾಗಿದ್ದು, 53 'ಶ್ರೀ ಮುಖ ಪದ್ಮ' ಮತ್ತು 2 'ಜೋಬಾ'ವನ್ನು ಜಗನ್ನಾಥನಿಗೆ ಹಾಗೂ ದೇವಿ ಸುಭದ್ರಾ ಅವರಿಗೆ ಎರಡು 'ತಡಕಿ' ಮತ್ತು ಎರಡು 'ಜೋಬಾ' ಗಳನ್ನು ದೇವಸ್ಥಾನಕ್ಕೆ ದಾನವಾಗಿ ನೀಡಲಾಗಿದೆ.

ಆಭರಣಗಳನ್ನು ಸ್ವೀಕರಿಸಿದ ನಂತರ, ಬಿಗಿ ಭದ್ರತೆಯ ಮಧ್ಯೆ ಇವುಗಳನ್ನು ದೇವಾಲಯದ ಕಚೇರಿಯ ಖಜಾನೆಯಲ್ಲಿ ಇರಿಸಲಾಗಿದ್ದು, ದೇವಾಲಯ ಆಡಳಿತವು ಆಭರಣಗಳನ್ನು 'ಭಂಡಾರ ಮೆಕಪಾ' (ದೇವಾಲಯದ ಖಜಾಂಚಿ)ಗೆ ಬುಧವಾರ ಹಸ್ತಾಂತರಿಸಲಿದೆ.

ಇದಕ್ಕೂ ಮೊದಲು ಭುವನೇಶ್ವರದ ಭಕ್ತರೊಬ್ಬರು ಶ್ರೀಮಂದಿರದ ದೇವತೆಗಳಿಗೆ 'ಸುರ್ಜ್ಯಾ' (ಸೂರ್ಯ) ಮತ್ತು 'ಚಂದ್ರ' (ಚಂದ್ರ) ಆಭರಣಗಳನ್ನು ದಾನ ಮಾಡಿದ್ದರು.

ಜನವರಿ 10 ರಂದು ಭಕ್ತರೊಬ್ಬರು 300 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದೇವತೆಗಳಿಗೆ ದಾನ ಮಾಡಿದ್ದರು. ಈ ಹಿಂದೆ ಮತ್ತೊಬ್ಬ ಭಕ್ತ 21 ಕೆಜಿ ಬೆಳ್ಳಿ ಆಭರಣಗಳನ್ನು ದಾನ ಮಾಡುವುದಾಗಿ ವಾಗ್ದಾನ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.