ADVERTISEMENT

ಕಳೆದ ವರ್ಷವೇ ಏರ್‌ಪೋರ್ಟ್‌ ನಿರ್ದೇಶಕರಿಗೆ ಡಿಜಿಸಿಎಯಿಂದ ಶೋಕಾಸ್ ನೋಟಿಸ್‌

ಕೊಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷತಾ ಕ್ರಮಗಳ ಕೊರತೆ

ಪಿಟಿಐ
Published 8 ಆಗಸ್ಟ್ 2020, 8:08 IST
Last Updated 8 ಆಗಸ್ಟ್ 2020, 8:08 IST
ಕೊಯಿಕ್ಕೋಡ್‌ನ ವಿಮಾನ ನಿಲ್ದಾಣದ ರನ್‌ವೇನಲ್ಲಿ ಅಪಘಾತಕ್ಕೀಡಾದ ವಿಮಾನ
ಕೊಯಿಕ್ಕೋಡ್‌ನ ವಿಮಾನ ನಿಲ್ದಾಣದ ರನ್‌ವೇನಲ್ಲಿ ಅಪಘಾತಕ್ಕೀಡಾದ ವಿಮಾನ   

ನವದೆಹಲಿ: ವಿಮಾನ ನಿಲ್ದಾಣದಲ್ಲಿ ’ವಿವಿಧ ತುರ್ತು ಸುರಕ್ಷತಾ ಕ್ರಮಗಳ ಕೊರತೆ’ ಕಂಡುಬಂದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಕಳೆದ ವರ್ಷದ ಜುಲೈ 11ರಂದುಕೋಯಿಕ್ಕೋಡ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ನೀಡಿತ್ತು.

ರನ್‌ವೇನಲ್ಲಿ ಬಿರುಕು, ನೀರು ನಿಂತುಕೊಳ್ಳುವುದು ಹಾಗೂ ಹೆಚ್ಚುವರಿ ರಬ್ಬರ್‌ ತುಂಡುಗಳು ರನ್‌ವೇ ಮೇಲೆ ಸಂಗ್ರಹವಾಗಿರುವುದು ಸೇರಿದಂತೆ ಹಲವು ತುರ್ತು ಸುರಕ್ಷತಾ ಕ್ರಮಗಳ ಕೊರತೆಗಳನ್ನು ಗುರುತಿಸಿದ ಡಿಜಿಸಿಎ,ಕೋಯಿಕ್ಕೋಡ್ ವಿಮಾನ ನಿಲ್ದಾಣದ ನಿರ್ದೇಶಕ ಕೆ. ಶ್ರೀನಿವಾಸ್ ರಾವ್ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿತ್ತು.

ಕಳೆದ ವರ್ಷ ಜುಲೈ 2ರಂದು ಸೌದಿ ಅರೇಬಿಯಾದ ಡಮ್ಮಮ್‌ನಿಂದ ಹೊರಟ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಕೋಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ’ಟೈಲ್ ಸ್ಟ್ರೈಕ್‌’(ವಿಮಾನದ ಹಿಂಬದಿ ರನ್‌‌ವೇಗೆ ತಾಗುವುದು) ಆಗಿತ್ತು . ಈ ಸಂಬಂಧ ಜುಲೈ 4 ಮತ್ತು 5ರಂದು ಡಿಜಿಸಿಎ ಇದೇ ಏರ್‌ಪೋರ್ಟ್‌ನಲ್ಲಿರುವ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿತ್ತು. ಸಮರ್ಪಕವಾಗಿ ಸುರಕ್ಷತಾಕ್ರಮಗಳನ್ನು ಕೈಗೊಳ್ಳದ ಕಾರಣ ಜುಲೈ 11ರಂದು ನೋಟಿಸ್‌ ನೀಡಿತ್ತು’ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸುದ್ದಿ ಸಂಸ್ಥೆಗೆ ಲಭ್ಯವಾಗಿರುವ ಶೋಕಾಸ್‌ ನೋಟಿಸ್‌ ಪ್ರತಿಯಲ್ಲಿ, ’ರನ್‌ವೇ 28 ಟಿಡಿಝೆಡ್‌(ಟಚ್‌ಡೌನ್ ಝೋನ್) ಮತ್ತು ರನ್‌ವೇ 10 ಟಿಡಿಝೆಡ್‌ನಲ್ಲಿ (ಮಧ್ಯ / ಎಡಭಾಗದಲ್ಲಿ) ಬಿರುಕು ಬಿಟ್ಟಿರುವುದನ್ನು ಶೋಕಾಸ್‌ ನೋಟಿಸ್‌ನಲ್ಲಿ ಡಿಜಿಸಿಎ ಉಲ್ಲೇಖಿಸಲಾಗಿದೆ (’ಟಚ್‌ಡೌನ್ ಝೋನ್’ ಎಂದರೆ ವಿಮಾನ ರನ್‌ವೇಗೆ ಇಳಿಯುವಾಗ ಮೊದಲು ಭೂ ಸ್ಪರ್ಶ ಮಾಡುವ ಸ್ಥಳ. ಈ ಪ್ರದೇಶ ರನ್‌ವೇ ಪ್ರದೇಶಕ್ಕಿಂತ ತುಸು ಮುಂದಿರುತ್ತದೆ). ಜತೆಗೆ, ರನ್‌ವೇಯ ಎರಡೂ ’ಟಚ್‌ಡೌನ್’ ಪ್ರದೇಶಗಳ ಎಡಬದಿ ಮತ್ತು ಮಧ್ಯದಲ್ಲಿ 3 ಮೀಟರ್‌ ಎತ್ತರದಷ್ಟು ಹೆಚ್ಚವುರಿ ರಬ್ಬರ್‌ ತುಂಡುಗಳು ರನ್‌ವೇ ಮೇಲೆ ಸಂಗ್ರಹವಾಗಿವೆ’ ಎಂಬ ಕೊರತೆಗಳನ್ನು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಶೋಕಾಸ್‌ ನೋಟಿಸ್‌ ನೀಡಿದ ಅಧಿಕಾರಿಗಳ ಮೇಲೆ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿಲ್ಲ ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.