ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶಾಲಯವು (ಡಿಜಿಸಿಎ) ಈ ವರ್ಷ 1,081 ವಾಣಿಜ್ಯ ಪೈಲಟ್ ಪರವಾನಗಿಯನ್ನು (ಸಿಪಿಎಲ್) ನೀಡಿದೆ. ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಪೈಲಟ್ ಪರವಾನಗಿಯನ್ನು ನೀಡಲಾಗಿದೆ.
ಕೋವಿಡ್ ಸಾಂಕ್ರಾಮಿಕದ ಬಳಿಕ ದೇಶದ ನಾಗರಿಕ ವಿಮಾನಯಾನ ಕ್ಷೇತ್ರವಾಗಿ ವೇಗವಾಗಿ ಚೇತರಿಸಕೊಳ್ಳುತ್ತಿರುವ ಈ ಸಮಯದಲ್ಲಿ, ದೇಶಿಯ ವಿಮಾನ ಸಂಚಾರದಲ್ಲಿ ದಾಖಲೆಯ ಪ್ರಮಾಣದಲ್ಲಿ ವಾಣಿಜ್ಯ ಪೈಲಟ್ ಪರವಾನಗಿ ನೀಡಲಾಗಿದೆ ಎನ್ನಲಾಗಿದೆ.
ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಡಿ. 6ರ ವೇಳೆಗೆ 1,081 ಸಿಪಿಎಲ್ ನೀಡಲಾಗಿದ್ದು, ಈ ವರ್ಷಾಂತ್ಯದ ವೇಳೆಗೆ ಈ ಸಂಖ್ಯೆಯು 1,100ಕ್ಕೆ ಏರಿಕೆಯಾಗಲಿದೆ. 2011ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಪರವಾನಗಿ ನೀಡಲಾಗಿದೆ. 2014ರಲ್ಲಿ 896 ಹಾಗೂ 2021ರಲ್ಲಿ 862 ಸಿಪಿಎಲ್ ನೀಡಲಾಗಿತ್ತು.
ಕನಿಷ್ಠ 200 ಗಂಟೆಗಳ ಹಾರಾಟವನ್ನು ಪೂರ್ಣಗೊಳಿಸಿದ ಹಾಗೂ ಇತರ ಷರತ್ತುಗಳನ್ನು ಪೂರೈಸಿದವರು ಮಾತ್ರ ವಾಣಿಜ್ಯ ಪೈಲಟ್ ಪರವಾನಗಿಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತಾರೆ.
ಸಿಪಿಎಲ್‌ಗೆ ಅರ್ಜಿ ಸಲ್ಲಿಸುವ ಮುನ್ನ ವಿಮಾನಯಾನ ತರಬೇತಿ ಸೇರಿದಂತೆ ಪೈಲಟ್ ತರಬೇತಿಗೆ ಸುಮಾರು ₹ 50 ಲಕ್ಷದ ತನಕ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
‘ಡಿಜಿಸಿಎ ಇದುವರೆಗೆ 25 ಸಾವಿರ ಪೈಲಟ್ ಪರವಾನಗಿ ನೀಡಿದ್ದು, ಇದರಿಂದ 11 ಸಾವಿರದಿಂದ 12 ಸಾವಿರ ಸಕ್ರಿಯ ಪೈಲಟ್‌ಗಳಿದ್ದಾರೆ. ಅವರಲ್ಲಿ 9ರಿಂದ 10 ಸಾವಿರ ಪೈಲಟ್‌ಗಳು ವಾಣಿಜ್ಯ ವಿಮಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.