ADVERTISEMENT

ಮಹಾತ್ಮ ಗಾಂಧಿ ನಾಡಿನಲ್ಲಿ ದ್ವೇಷಪೂರಿತ ಭಾಷಣ ಸಹಿಸಲಾಗದು: ಗೆಹಲೋತ್

ಪಿಟಿಐ
Published 26 ಡಿಸೆಂಬರ್ 2021, 13:58 IST
Last Updated 26 ಡಿಸೆಂಬರ್ 2021, 13:58 IST
ಅಶೋಕ್ ಗೆಹಲೋತ್
ಅಶೋಕ್ ಗೆಹಲೋತ್   

ಜೈಪುರ: ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ 'ಧರ್ಮ ಸಂಸತ್' ಕಾರ್ಯಕ್ರಮದಲ್ಲಿ ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದನ್ನು ಟೀಕೆ ಮಾಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಮಹಾತ್ಮ ಗಾಂಧಿ ನಾಡಿನಲ್ಲಿ ಇಂತಹ ಕೃತ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಭಾಷಣಕಾರರು ಬಳಕೆ ಮಾಡಿರುವ ಹಿಂಸಾಚಾರದ ಭಾಷೆಗಳು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಈ ಕುರಿತು ಮೌನ ತಾಳಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ADVERTISEMENT

'ಉತ್ತರಾಖಂಡದಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮವು ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ನಮ್ಮ ಸಂಸ್ಕೃತಿಯ ವಿರುದ್ಧ ಹಿಂಸಾಚಾರದ ಪದ ಪ್ರಯೋಗ ಮಾಡಲಾಗಿದೆ. ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಮೌನವಾಗಿದ್ದಾರೆ. ಕ್ರಮ ಏಕೆ ಕೈಗೊಂಡಿಲ್ಲ' ಎಂದು ಗೆಹಲೋತ್ ಪ್ರಶ್ನಿಸಿದರು.

'ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆಯನ್ನು 'ವಿಶ್ವ ಅಹಿಂಸಾ ದಿನ'ವನ್ನಾಗಿ ಆಚರಿಸಲಾಗುತ್ತದೆ. ಅವರ ಅದೇ ನಾಡಿನಲ್ಲಿ ಇಂತಹ ಕೃತ್ಯ ನಡೆದಿರುವುದು ದುರದೃಷ್ಟಕರ. ನಾವು ಪ್ರೀತಿ ಹಾಗೂ ಸೌಹಾರ್ದಯುತದಿಂದ ಬಾಳದಿದ್ದರೆ ದೇಶದಲ್ಲಿ ಒಮ್ಮತ ಮೂಡಲು ಹೇಗೆ ಸಾಧ್ಯ? ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ, ಪಾರ್ಸಿ ಎಲ್ಲರೂ ಒಗ್ಗಟ್ಟಾಗಿ ಬಾಳಬೇಕು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.