ಬೆಂಗಳೂರು: ಮಹಾರಾಷ್ಟ್ರದಲ್ಲಿ ತಲೆದೂರಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ರಾಜಕೀಯ ವಿಶ್ಲೇಷಕ, ಯೂಟ್ಯೂಬರ್ ಧ್ರುವ್ ರಾಠೆ ಬಿಜೆಪಿಯನ್ನು ಕುದುರೆ ವ್ಯಾಪಾರದ ರಾಜ ಎಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಯಾವೆಲ್ಲ ರಾಜ್ಯಗಳಲ್ಲಿ ಕುದುರೆ ವ್ಯಾಪಾರ ನಡೆಸಲಾಗಿದೆ ಎಂಬ ಬಗ್ಗೆ ಪಟ್ಟಿ ಮಾಡಿರುವ ಧ್ರುವ್ ರಾಠೆ, ಹಾಗಿದ್ದೂ ಮೋದಿಜೀ ಅವರು ಭ್ರಷ್ಟಾಚಾರ ನಡೆಸಿಲ್ಲ ಎಂದು ಕುಟುಕಿದ್ದಾರೆ.
2016ರಲ್ಲಿ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಸಿ ಯಶಸ್ಸು ಸಾಧಿಸಿದ್ದಾರೆ. 2017ರಲ್ಲಿ ಗೋವಾದಲ್ಲಿ ಯಶಸ್ವಿಯಾಗಿದ್ದಾರೆ. ಅದೇ ವರ್ಷ ದೆಹಲಿಯಲ್ಲಿ ವಿಫಲಗೊಂಡಿದ್ದಾರೆ ಎಂದು ಧ್ರುವ್ ರಾಠೆ ಸಂಕ್ಷಿಪ್ತವಾಗಿ ಹೇಳಿದ್ದಾರೆ.
2019ರಲ್ಲಿ ಕರ್ನಾಟಕದಲ್ಲಿ ನಡೆಸಿದ ಕುದುರೆ ವ್ಯಾಪಾರದಲ್ಲಿ ಯಶ ಕಂಡಿದ್ದಾರೆ. 2020ರಲ್ಲಿ ಮಧ್ಯ ಪ್ರದೇಶದಲ್ಲಿ ಗೆಲುವು ಕಂಡಿದ್ದಾರೆ. ಆದರೆ ಅದೇ ವರ್ಷ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ಕುದುರೆ ವ್ಯಾಪಾರದ ಮೂಲಕ ಸರ್ಕಾರ ರಚಿಸುವಲ್ಲಿ ಎಡವಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಪ್ರಹಸನ ನಡೆಯುತ್ತಿದೆ ಎಂದು ಧ್ರುವ್ ರಾಠೆ ಟ್ವೀಟ್ ಮಾಡಿದ್ದಾರೆ.
ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನಾ ಶಾಸಕರು ಮುಂಬೈ ತೊರೆದು ಗುವಾಹಟಿಯ ರೆಸಾರ್ಟ್‌ನಲ್ಲಿ ಸೇರಿಕೊಂಡಿದ್ದಾರೆ. ಈ ಬೆಳವಣಿಗೆ ಹಿಂದೆ ಬಿಜೆಪಿಯ ಕೈವಾಡವಿದೆ. ಮಹಾರಾಷ್ಟ್ರದಲ್ಲಿರುವ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.