ಮುಂಬೈ: ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಸುಪಾ ಟೋಲ್ ಪ್ಲಾಜಾ ಬಳಿ ಚುನಾವಣಾ ಆಯೋಗದ ಸ್ಟ್ಯಾಟಿಕ್ ಸರ್ವೈಲೆನ್ಸ್ (ಎಸ್‌ಎಸ್‌ಟಿ) ತಂಡವು ಸುಮಾರು ₹24 ಕೋಟಿ ರೂಪಾಯಿ ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ 20ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದಾದ್ಯಂತ ಸ್ಟ್ಯಾಟಿಕ್ ಸರ್ವೈಲೆನ್ಸ್ (ಎಸ್‌ಎಸ್‌ಟಿ) ತಂಡಗಳನ್ನು ನಿಯೋಜಿಸಲಾಗಿದೆ. ಅಕ್ರಮಗಳನ್ನು ತಡೆಯಲು ಹೆಚ್ಚಿನ ನಿಗಾ ವಹಿಸಲಾಗಿದ್ದು, ಜಿಲ್ಲೆಗಳ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ದಕ್ಷಿಣ ಮುಂಬೈನ ಝವೇರಿ ಬಜಾರ್‌ನ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಸುಪಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅರುಣ್ ತಿಳಿಸಿದ್ದಾರೆ.
ಆರೋಪಿಗಳಿದ್ದ ಕಾರನ್ನು ತಡೆದಿದ್ದ ಚುನಾವಣಾಧಿಕಾರಿಗಳು ಚಿನ್ನಾಭರಣಗಳ ಕುರಿತಾದ ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರೆ. ಆದರೆ, ಆರೋಪಿಗಳು ಸೂಕ್ತ ದಾಖಲೆಗಳನ್ನು ತೋರಿಸಿರಲಿಲ್ಲ. ಬಳಿಕ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ಅರುಣ್ ಹೇಳಿದ್ದಾರೆ.
ಛತ್ರಪತಿ ಸಂಭಾಜಿನಗರ, ಅಹಲ್ಯಾನಗರ ಮತ್ತು ಜಲಗಾಂವ್ ಜಿಲ್ಲೆಗಳ ವಿವಿಧ ಭಾಗಗಳಿಗೆ ಆಭರಣಗಳನ್ನು ತಲುಪಿಸಲು ಉದ್ದೇಶಿಸಲಾಗಿತ್ತು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ದಕ್ಷಿಣ ಮುಂಬೈನ ಮರೈನ್ ಡ್ರೈವ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ₹10.8 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ಗುರುವಾರ ವಶಪಡಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.