ADVERTISEMENT

ಮುಂಬೈ | ನೂಡಲ್ ಪ್ಯಾಕೇಟ್‌ನಲ್ಲಿ ಕಳ್ಳಸಾಗಣೆ ಯತ್ನ; ₹6.46 ಕೋಟಿಯ ವಜ್ರ-ಚಿನ್ನ ವಶ

ಪಿಟಿಐ
Published 23 ಏಪ್ರಿಲ್ 2024, 6:43 IST
Last Updated 23 ಏಪ್ರಿಲ್ 2024, 6:43 IST
<div class="paragraphs"><p>ನೂಡಲ್ ಪ್ಯಾಕೇಟ್‌ನಲ್ಲಿ ವಜ್ರ ಕಳ್ಳಸಾಗಣೆ ಯತ್ನ</p></div>

ನೂಡಲ್ ಪ್ಯಾಕೇಟ್‌ನಲ್ಲಿ ವಜ್ರ ಕಳ್ಳಸಾಗಣೆ ಯತ್ನ

   

(ಚಿತ್ರ ಕೃಪೆ: X/@mumbaicus3)

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು ₹6.46 ಕೋಟಿ ಮೌಲ್ಯದ ವಜ್ರ ಹಾಗೂ ಚಿನ್ನವನ್ನು ಕಸ್ಟಮ್ಸ್ ಇಲಾಖೆಯು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ವಾರಾಂತ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ₹2.02 ಕೋಟಿ ಮೌಲ್ಯದ ವಜ್ರ ಮತ್ತು ₹4.44 ಕೋಟಿ ಮೌಲ್ಯದ 6.8 ಕೆ.ಜಿಗಿಂತಲೂ (6.815) ಹೆಚ್ಚು ಚಿನ್ನವನ್ನು ವಶಪಡಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

ಮುಂಬೈಯಿಂದ ಬ್ಯಾಂಕಾಕ್‌ಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ಶೋಧ ನಡೆಸಿದಾಗ ಟ್ರಾಲಿ ಬ್ಯಾಗ್‌ನೊಳಗೆ ನೂಡಲ್ ಪ್ಯಾಕೇಟ್‌ಗಳಲ್ಲಿ ವಜ್ರಗಳನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡಿರುವುದು ಕಂಡುಬಂದಿದೆ. ಬಳಿಕ ಪ್ರಯಾಣಿಕನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲಂಬೊದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಮಹಿಳೆ, ಒಳ ಉಡುಪಿನಲ್ಲಿ 321 ಗ್ರಾಂ ತೂಕದ ಚಿನ್ನ ಅಡಗಿಸಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಇದಲ್ಲದೆ ದುಬೈ ಹಾಗೂ ಅಬುಧಾಬಿಯಿಂದ ತಲಾ ಇಬ್ಬರು ಮತ್ತು ಬಹ್ರೇನ್, ದೋಹಾ, ರಿಯಾದ್, ಮಸ್ಕತ್, ಬ್ಯಾಂಕಾಕ್ ಮತ್ತು ಸಿಂಗಾಪುರದಿಂದ ತಲಾ ಒಬ್ಬರು ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಗಳನ್ನು ಶೋಧ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ₹4.40 ಕೋಟಿ ಮೌಲ್ಯದ 6.1 ಕೆ.ಜಿ ಚಿನ್ನ (6.199) ವಶಪಡಿಸಿಕೊಳ್ಳಲಾಗಿದೆ. ದೇಹದ ಭಾಗ, ಗುದದ್ವಾರ, ಬ್ಯಾಗೇಜ್ ಮೂಲಕ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಲಾಗಿತ್ತು. ಮೂವರನ್ನು ಬಂಧಿಸಲಾಯಿತು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.