ADVERTISEMENT

ತಮಿಳುನಾಡು ರಾಜ್ಯಪಾಲರಿಂದ ಸರ್ವಾಧಿಕಾರಿ ಧೋರಣೆ: ಸುಪ್ರಿಯಾ ಸುಳೆ

ಪಿಟಿಐ
Published 30 ಜೂನ್ 2023, 10:47 IST
Last Updated 30 ಜೂನ್ 2023, 10:47 IST
ಎನ್‌ಸಿ‍ಪಿ ಸಂಸದೆ ಸುಪ್ರಿಯಾ ಸುಳೆ
ಎನ್‌ಸಿ‍ಪಿ ಸಂಸದೆ ಸುಪ್ರಿಯಾ ಸುಳೆ   

ಮುಂಬೈ: ಸಚಿವ ವಿ. ಸೆಂಥಿಲ್‌ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿದ ತಮಿಳುನಾಡು ರಾಜ್ಯಪಾಲ ಆರ್‌.ಎನ್‌ ರವಿ ಅವರ ನಡೆಯನ್ನು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ‘ಸರ್ವಾಧಿಕಾರ’ ಎಂದು ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸುಳೆ, ರಾಜ್ಯಪಾಲರು ತಾವು ತಮಿಳುನಾಡಿನ ರಾಜ್ಯಪಾಲರೆಂಬುವುದನ್ನು ಮರೆತು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಪಾಲರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

‌ಉದ್ಯೋಗಕ್ಕಾಗಿ ಹಣ ಪಡೆದ ಹಗರಣಕ್ಕೆ ಸಂಬಂಧಿಸಿದಂತೆ ಸೆಂಥಿಲ್‌ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದರು.

ಇದಾದ ಕೆಲವು ದಿನಗಳ ಬಳಿಕ (ಗುರುವಾರ) ಸಚಿವ ವಿ. ಸೆಂಥಿಲ್‌ ಬಾಲಾಜಿ ಅವರನ್ನು ರಾಜ್ಯಪಾಲ ಆರ್.ಎನ್. ರವಿ ಅವರು ಸಂಪುಟದಿಂದ ವಜಾಗೊಳಿಸಿದ್ದಾರೆ.

ADVERTISEMENT

ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ವಜಾ ಆದೇಶವನ್ನು ಸದ್ಯಕ್ಕೆ ಹಿಂಪಡೆಯಲು ನಿರ್ಧರಿಸಿದ್ದಾರೆ. ಇದನ್ನು ವಿರೋಧಿಸಿ ‘ಇದು ಸರ್ವಾಧಿಕಾರ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಲ್ಲಿದೆ? ಎಂದು ಸುಳೆ ಪ್ರಶ್ನಿಸಿದ್ದಾರೆ.

ಇಂತಹ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದರೆ, ಇತರ ರಾಜ್ಯಗಳಲ್ಲಿಯೂ ಸಂಭವಿಸಬಹುದು ಎಂದು ಬಾರಾಮತಿ ಸಂಸದೆ ಹೇಳಿದರು. ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಸಮಸ್ಯೆಯ ಬಗ್ಗೆ ಕೇಳಿದಾಗ, ‘ಪ್ರತಿಕ್ರಿಯಿಸಲು ಇದು ತುಂಬಾ ಅಕಾಲಿಕವಾಗಿದೆ, ಕರಡು ಬರಲಿ ನಾವು ಪ್ರತಿಕ್ರಿಯಿಸುತ್ತೇವೆ’ ಎಂದು ಸುಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.