ಚೀಫ್‌ಬೊಝೊ (ನಾಗಾಲ್ಯಾಂಡ್): ‘ಅಯೋಧ್ಯೆಯ ರಾಮಮಂದಿರದಲ್ಲಿ ಜ. 22ರಂದು ನಡೆಯಲಿರುವ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸೇರಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರಿತ ರಾಜಕೀಯ ಕಾರ್ಯಕ್ರಮವನ್ನಾಗಿಸಿದ್ದರಿಂದ, ಅದರಲ್ಲಿ ಪಾಲ್ಗೊಳ್ಳುವುದು ತಮ್ಮ ಪಕ್ಷದ ನಾಯಕರಿಗೆ ಕಷ್ಟದ ಕೆಲಸ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯ ಭಾಗವಾಗಿ ನಾಗಾಲ್ಯಾಂಡ್ ಮೂಲಕ ಸಾಗಿದ ಜಾಥಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚುನಾವಣೆಯ ಸ್ಪರ್ಶ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಮುಖ್ಯ ವಿರೋಧಿ ಪಕ್ಷವಾಗಿರುವ ಬಿಜೆಪಿ ಮತ್ತು ಸಂಘಟನೆಯಾದ ಆರ್‌ಎಸ್ಎಸ್ ಈ ಕಾರ್ಯಕ್ರಮವನ್ನು ತಮ್ಮ ಚುನಾವಣಾ ಲಾಭಕ್ಕಾಗಿ ರಾಜಕೀಯಗೊಳಿಸಿದ್ದರಿಂದ, ಅದರಲ್ಲಿ ನಮ್ಮ ಪಕ್ಷದ ನಾಯಕರು ಪಾಲ್ಗೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟವು ಬಿಜೆಪಿಯನ್ನು ಮಣಿಸಲಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದೊಳಗಿನ ಸೀಟು ಹಂಚಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಒಕ್ಕೂಟದೊಳಗೆ ಇರಬಹುದಾದ ಸಣ್ಣ ಪುಟ್ಟ ವ್ಯತ್ಯಾಸಗಳು ಶೀಘ್ರದಲ್ಲಿ ಕೊನೆಯಾಗಲಿವೆ. ಬಿಜೆಪಿ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟ ನಡೆಸಿ ಮಣಿಸಲಾಗುವುದು’ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜ. 14ರಂದು ಆರಂಭವಾದ ಭಾರತ್ ಜೋಡೊ ನ್ಯಾಯ ಯಾತ್ರೆಯು, ಮಂಗಳವಾರ ನಾಗಾಲ್ಯಾಂಡ್‌ನ ತೌಬಾಲ್ ಪ್ರದೇಶವನ್ನು ತಲುಪಿದೆ. ಈ ಜಾಥಾವು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರವನ್ನು ತಲುಪಲಿದೆ. ಒಟ್ಟು 6,713 ಕಿ.ಮೀ. ದೂರವನ್ನು ಕ್ರಮಿಸಲಿದೆ. ಮಾರ್ಚ್ 20 ಅಥವಾ 21ರಂದು ಮುಂಬೈನಲ್ಲಿ ಸಮಾರೋಪಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.