ಜಮ್ಮು/ನವದೆಹಲಿ: ನಿರ್ದಿಷ್ಟ ದಾಳಿಯನ್ನು (ಸರ್ಜಿಕಲ್ ಸ್ಟ್ರೈಕ್) ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು, ‘ಕೇಂದ್ರ ಸರ್ಕಾರವು ಈ ಕುರಿತು ಸುಳ್ಳು ಹೇಳುತ್ತಿದೆ’ ಎಂದು ಸೋಮವಾರ ಆರೋಪಿಸಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ದ್ವೇಷದಿಂದ ಕಾಂಗ್ರೆಸ್ ಪಕ್ಷವು ಕುರುಡಾಗಿದೆ ಮತ್ತು ಸಶಸ್ತ್ರ ಪಡೆಗಳನ್ನು ಅಪಮಾನಿಸಿದೆ’ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೊ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ದಿಗ್ವಿಜಯ ಸಿಂಗ್ ಅವರು, ‘ಸರ್ಕಾರವು ನಿರ್ದಿಷ್ಟ ದಾಳಿಯ ಬಗ್ಗೆ ಮಾತನಾಡುತ್ತಿದೆ. ಈ ದಾಳಿಯಲ್ಲಿ ಹಲವು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದೂ ಹೇಳಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ಅವರು ಸುಳ್ಳಿನ ಕಂತೆ ಕಟ್ಟಿಕೊಳ್ಳುವ ಮೂಲಕ ಆಡಳಿತ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ಶ್ರೀನಗರದಿಂದ ದೆಹಲಿಗೆ ತನ್ನ ಸಿಬ್ಬಂದಿಯನ್ನು ವಿಮಾನದ ಮೂಲಕ ಕಳುಹಿಸಬೇಕು ಎಂಬ ಸಿಆರ್‌ಪಿಎಫ್‌ನ ಮನವಿಯನ್ನು ಸರ್ಕಾರ ಒಪ್ಪಲಿಲ್ಲ. ಇದರ ಪರಿಣಾಮವಾಗಿ 2019ರಲ್ಲಿ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾದರು’ ಎಂದು ಆರೋಪಿಸಿದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ‘ರಾಹುಲ್ ಅವರು ನಡೆಸುತ್ತಿರುವ ಯಾತ್ರೆಯು ಹೆಸರಿಗಷ್ಟೇ ಭಾರತ್ ಜೋಡೊ ಯಾತ್ರೆ, ಅವರ ಸಹೋದ್ಯೋಗಿಗಳು ದೇಶವನ್ನು ‘ಒಡೆಯುವ’ ಕೆಲಸ ಮಾಡುತ್ತಿದ್ದಾರೆ ಎಂಬುದು ಇಂತಹ ಹೇಳಿಕೆಗಳಿಂದ ತಿಳಿಯುತ್ತದೆ. ಇದು ನಿಜವಾಗಿಯೂ ಭಾರತ್ ತೋಡೊ ಯಾತ್ರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸಶಸ್ತ್ರ ಪಡೆಗಳ ವಿರುದ್ಧ ಮಾತನಾಡಿದರೆ ಭಾರತವು ಸಹಿಸದು’ ಎಂದಿದ್ದಾರೆ.
‘ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಭಾರತೀಯ ವಾಯುಪಡೆ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್ ನಾಯಕರು ನಿರ್ದಿಷ್ಟ ದಾಳಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ’ ಎಂದೂ ಗೌರವ್ ಆರೋಪಿಸಿದ್ದಾರೆ.
‘ಕಾಂಗ್ರೆಸ್‌ಗೆ ಸಶಸ್ತ್ರ ಪಡೆಗಳ ಮೇಲೆ ನಂಬಿಕೆ ಇಲ್ಲ. ಪದೇ ಪದೇ ಅವುಗಳನ್ನು ಮತ್ತು ದೇಶದ ನಾಗರಿಕರನ್ನು ಅಪಮಾನಿಸುತ್ತಿದೆ’ ಎಂದಿದ್ದಾರೆ.
'ನಮ್ಮ ಸಶಸ್ತ್ರ ಪಡೆಗಳು ಭಯೋತ್ಪಾದಕರ ಮೇಲೆ ದಾಳಿ ನಡೆಸಿದಾಗ ಪಾಕಿಸ್ತಾನಕ್ಕೆ ನೋವಾದರೆ, ಭಾರತದಲ್ಲಿ ಕಾಂಗ್ರೆಸ್‌ಗೆ ದುಃಖವಾಗಿದೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.