ADVERTISEMENT

ನ್ಯೂನತೆ ಹೊಂದಿದ್ದ ಇವಿಎಂ, ವಿವಿಪ್ಯಾಟ್‌ಗಳ ಸಂಖ್ಯೆ ಬಹಿರಂಗಕ್ಕೆ ಸಿಐಸಿ ಸೂಚನೆ

2019ರ ಲೋಕಸಭಾ ಚುನಾವಣೆಯಲ್ಲಿ ಬಳಸಿದ್ದ ಯಂತ್ರಗಳ ಪರಿಶೀಲನೆ: ಮಾಹಿತಿ ಕೋರಿ ಅರ್ಜಿ

ಪಿಟಿಐ
Published 8 ಆಗಸ್ಟ್ 2021, 9:46 IST
Last Updated 8 ಆಗಸ್ಟ್ 2021, 9:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಇವಿಎಂಗಳು ಹಾಗೂ ವಿವಿಪ್ಯಾಟ್‌ಗಳ ಪೈಕಿ ಎಷ್ಟು ಯಂತ್ರಗಳ ತಂತ್ರಾಂಶದ ಪರಿಶೀಲನೆ ವೇಳೆ ದೋಷ ಹಾಗೂ ನ್ಯೂನತೆಗಳು ಕಂಡು ಬಂದಿವೆ ಎಂಬ ಮಾಹಿತಿ ನೀಡುವಂತೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಆದೇಶಿಸಿದೆ.

ಆರ್‌ಟಿಐ ಕಾರ್ಯಕರ್ತ ವೆಂಕಟೇಶ್‌ ನಾಯಕ ಎಂಬುವವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಸ್ಟ್ಯಾಂಡರ್ಡೈಜೇಷನ್‌, ಟೆಸ್ಟಿಂಗ್‌ ಆ್ಯಂಡ್‌ ಕ್ವಾಲಿಟಿ ಸರ್ಟಿಫೀಕೇಷನ್‌ (ಎಸ್‌ಟಿಕ್ಯೂಸಿ) ನಿರ್ದೇಶನಾಲಯಕ್ಕೆ ಸಿಐಸಿ ಈ ಆದೇಶ ನೀಡಿದೆ.

ಇಸಿಐಎಲ್‌ ಮತ್ತು ಬಿಇಎಲ್‌ ಸಂಸ್ಥೆಗಳು ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಅಭಿವೃದ್ಧಿಪಡಿಸಿ, ತಯಾರಿಸಿವೆ. ಇವುಗಳನ್ನು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿತ್ತು. ಈ ಯಂತ್ರಗಳ ಲೆಕ್ಕಪರಿಶೋಧನೆ ಹಾಗೂ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ವೆಂಕಟೇಶ್‌ ಅವರು ಎಸ್‌ಟಿಕ್ಯೂಸಿ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8 (1)(ಡಿ) ಉಲ್ಲೇಖಿಸಿದ್ದ ನಿರ್ದೇಶನಾಲಯ, ಮಾಹಿತಿ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವೆಂಕಟೇಶ್‌ ಅವರು ಸಿಐಸಿಗೆ ಮೇಲ್ಮನವಿ ಸಲ್ಲಿಸಿದ್ದರು.

‘ಅರ್ಜಿದಾರರ ಮೇಲ್ಮನವಿ ಸಮರ್ಥನೀಯವಾಗಿಯೇ ಇದೆ. ಅವರು ಕೇಳಿರುವುದು ಅಂಕಿ–ಸಂಖ್ಯೆಗಳ ಮಾಹಿತಿ. ಈ ಮಾಹಿತಿಯನ್ನು ನೀಡಲು ಯಾವುದೇ ವಿನಾಯಿತಿಯ ಅಗತ್ಯವಿಲ್ಲ’ ಎಂದು ಮಾಹಿತಿ ಆಯುಕ್ತರಾದ ವನಜಾ ಎನ್‌.ಸರ್ನಾ ಅಭಿಪ್ರಾಯಪಟ್ಟಿದ್ದಾರೆ.

‘ಇವಿಎಂ, ವಿವಿಪ್ಯಾಟ್‌ಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳ ಹೆಸರು ಹಾಗೂ ಅವರ ಹುದ್ದೆಗಳ ವಿವರ ನೀಡುವುದು ಬೇಡ. ಆದರೆ, ಯಾವ ಊರುಗಳಲ್ಲಿ ಹಾಗೂ ಯಾವ ದಿನಾಂಕಗಳಂದು ಪರಿಶೀಲನೆ ನಡೆಸಲಾಗಿದೆ ಎಂಬ ಮಾಹಿತಿ ಒದಗಿಸುವಂತೆ’ ಅವರು ಎಸ್‌ಟಿಕ್ಯೂಸಿಡಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.