ನವದೆಹಲಿ: ಹವಾನಿಯಂತ್ರಿತ ಸೌಲಭ್ಯವುಳ್ಳ ಎಕ್ಸಿಕ್ಯೂಟಿವ್ ದರ್ಜೆಯ ರೈಲುಗಳ ಟಿಕೆಟ್ ದರದಲ್ಲಿ ಶೇ 25 ವಿನಾಯ್ತಿ ನೀಡುವ ಯೋಜನೆ ಇದೇ ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಬುಧವಾರ ತಿಳಿಸಿದೆ.
‘ಕಳೆದ ವರ್ಷ ಪ್ರತಿ ತಿಂಗಳು ಶೇ 50ಕ್ಕಿಂತಲೂ ಕಡಿಮೆ ಸೀಟುಗಳು ಭರ್ತಿಯಾಗಿದ್ದ ಶತಾಬ್ದಿ, ಗತಿಮಾನ್ ಎಕ್ಸ್‌ಪ್ರೆಸ್, ತೇಜಸ್, ಡಬಲ್ ಡೆಕ್ಕರ್, ಇಂಟರ್‌ಸಿಟಿ ರೈಲುಗಳು ಮಾತ್ರ ಈ ಯೋಜನೆಗೆ ಅರ್ಹವಾಗಿರುತ್ತವೆ’ ಎಂದು ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ:ಗಣೇಶ ಚತುರ್ಥಿಗೆ ಬೆಂಗಳೂರು– ಬೆಳಗಾವಿ ವಿಶೇಷ ರೈಲು
ರಸ್ತೆ ಸಾರಿಗೆ ಹಾಗೂ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಸೌಲಭ್ಯದಿಂದಾಗಿ ರೈಲ್ವೆ ಇಲಾಖೆ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಆದಾಯ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಇಲಾಖೆ ಈ ಯೋಜನೆ ರೂಪಿಸಿದೆ.
‘ಮೂಲ ದರದಲ್ಲಿ ಶೇ 25 ವಿನಾಯ್ತಿ ನೀಡಬಹುದು. ಈ ದರ ನಿಗದಿಪಡಿಸುವ ಅಧಿಕಾರವನ್ನು ಆಯಾ ವಲಯದ ಮುಖ್ಯ ವಾಣಿಜ್ಯ ನಿರ್ವಹಣಾ ಅಧಿಕಾರಿಗಳಿಗೆ ವಹಿಸಲಾಗಿದೆ. ಪೂರ್ತಿ ವರ್ಷಕ್ಕೆ, ತಿಂಗಳ ಲೆಕ್ಕದಲ್ಲಿ, ನಿರ್ದಿಷ್ಟ ವಾರ ಅಥವಾ ವಾರಾಂತ್ಯಗಳಿಗೆ ಈ ವಿನಾಯ್ತಿ ದರ ಸೌಲಭ್ಯ ನೀಡಬಹುದು. ಕಾಯ್ದಿರಿಸುವಿಕೆ ಶುಲ್ಕ, ಜಿಎಸ್‌ಟಿ ಸೇರಿದಂತೆ ಇತರೆ ದರಗಳು ಪ್ರತ್ಯೇಕವಾಗಿರುತ್ತವೆ’ ಎಂದು ಹೇಳಲಾಗಿದೆ.
ಚೆನ್ನೈ ಸೆಂಟ್ರಲ್–ಮೈಸೂರು ಶತಾಬ್ದಿ, ಅಹಮದಾಬಾದ್–ಮುಂಬೈ ಸೆಂಟ್ರಲ್ ಶತಾಬ್ದಿ ಹಾಗೂ ನ್ಯೂ ಜಲ್ಪೈಗುರಿ–ಹೌರಾ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಸ್ತುತ ಇರುವ ವಿನಾಯಿತಿ ದರವೇ ಮುಂದುವರಿಯಲಿದೆ ಎಂದು ಸಹ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ರೈಲು ಸಂಚಾರಕ್ಕೂ ಬೇಕಿದೆ ಉತ್ತೇಜನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.