ನವದೆಹಲಿ: ಹರಿಯಾಣದಲ್ಲಿ ಬಿಜೆಪಿ ಹರಡುತ್ತಿರುವ 'ನಿರುದ್ಯೋಗದ ಕಾಯಿಲೆ'ಯು ಯುವಜನತೆಯ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪ್ರತಿ ಕುಟುಂಬದ ಸಮೃದ್ಧತೆಯನ್ನು ಖಾತ್ರಿಪಡಿಸಲಾಗುವುದು' ಎಂದು ಹೇಳಿದ್ದಾರೆ.
'ಹರಿಯಾಣದಲ್ಲಿ ಬಿಜೆಪಿ ಹರಡುತ್ತಿರುವ ನಿರುದ್ಯೋಗದ ಕಾಯಿಲೆಯು ಯುವಜನತೆಯ ಭವಿಷ್ಯ ಮತ್ತು ರಾಜ್ಯದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ. ದೇಶದಲ್ಲಿ ಇಂದು ಹರಿಯಾಣದಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ' ಎಂದು ಹೇಳಿದ್ದಾರೆ.
'ಕಳೆದೊಂದು ದಶಕದಲ್ಲಿ ರಾಜ್ಯದ ಯುವಜನತೆಗೆ ಉದ್ಯೋಗ ನೀಡುವ ಪ್ರತಿಯೊಂದು ವ್ಯವಸ್ಥೆಯ ಬೆನ್ನೆಲುಬನ್ನು ಬಿಜೆಪಿ ಮುರಿದಿದೆ. ಜಿಎಸ್‌ಟಿ, ನೋಟು ರದ್ಧತಿ ಮೂಲಕ ಸಣ್ಣ ಉದ್ಯಮಗಳನ್ನು ನಾಶ ಮಾಡಿದೆ. 'ಅಗ್ನಿವೀರ' ಯೋಜನೆಯಿಂದ ಸೇನೆಗೆ ಸೇರುವ ಯುವಕರ ಉತ್ಸಾಹವನ್ನು ಕುಗ್ಗಿಸಿದೆ. ಕರಾಳ ಕಾನೂನಿನ ಮೂಲಕ ಕೃಷಿ, ವ್ಯಾಪಾರ ಮಾಡುವವರ ಧೈರ್ಯವನ್ನು ಮುರಿದಿದೆ. ಕೀಡಾಪಟುಗಳಿಗೆ ಬೆಂಬಲ ನೀಡದೇ ಅವರ ಕನಸನ್ನು ನೂಚ್ಚುನೂರುಗೊಳಿಸಿದೆ' ಎಂದು ಆರೋಪಿಸಿದ್ದಾರೆ.
ಇದರ ಪರಿಣಾಮ ಯುವ ಜನತೆ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದು, ಅಪರಾಧ ಕೃತ್ಯದತ್ತ ಹಾದಿ ಹಿಡಿಯುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎರಡು ಲಕ್ಷ ಕಾಯಂ ಉದ್ಯೋಗ ಸೇರಿದಂತೆ ಯುವಜನತೆಯನ್ನು ಡ್ರಗ್ಸ್‌ನಿಂದ ಮುಕ್ತಗೊಳಿಸಲಿದ್ದೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.