ADVERTISEMENT

India – China | ಸೇನಾ ವಾಪಸಾತಿ ಮೊದಲ ಹೆಜ್ಜೆ, ನಂತರ ಉದ್ವಿಗ್ನತೆ ಶಮನ: ಜೈಶಂಕರ್

ಪಿಟಿಐ
Published 27 ಅಕ್ಟೋಬರ್ 2024, 13:28 IST
Last Updated 27 ಅಕ್ಟೋಬರ್ 2024, 13:28 IST
<div class="paragraphs"><p>ಎಸ್. ಜೈಶಂಕರ್ </p></div>

ಎಸ್. ಜೈಶಂಕರ್

   

ಪಿಟಿಐ ಚಿತ್ರ

ಮುಂಬೈ: ಪೂರ್ವ ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ ನಿಯೋಜಿಸಿರುವ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯು, ಉಭಯ ದೇಶಗಳ ಗಡಿಯಲ್ಲಿ 2020ಕ್ಕೂ ಮೊದಲು ಇದ್ದ ಸ್ಥಿತಿಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ADVERTISEMENT

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ‘ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಸೇನೆ ವಾಪಸಾತಿ ಪ್ರಕ್ರಿಯೆ ವಿಚಾರದಲ್ಲಿ ಒಮ್ಮತ ಮೂಡಿದೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ತುಂಬಾ ಸಮೀಪಕ್ಕೆ ಸಾಗಿದ್ದ ಎರಡೂ ಸೇನೆಗಳು ಮತ್ತೆ ತಮ್ಮ ನೆಲೆಗಳಿಗೆ ವಾಪಸ್‌ ಆಗಿವೆ. 2020ರ ವೇಳೆ ಇದ್ದ ಸ್ಥಿತಿ ಮತ್ತೆ ನಿರ್ಮಾಣವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಸೇನಾ ವಾಪಸಾತಿ ಪೂರ್ಣಗೊಳ್ಳುವುದು ಮೊದಲ ಹೆಜ್ಜೆಯಾಗಿದೆ. ಉದ್ವಿಗ್ನತೆ ಶಮನಗೊಳಿಸುವುದು ನಂತರದ್ದು. ಆದರೆ, ಮತ್ತೊಂದು ರಾಷ್ಟ್ರವೂ ಅದೇ ನಿಟ್ಟಿನಲ್ಲಿ ಮುಂದುವರಿಯುತ್ತಿದೆ ಎಂಬುದು ಭಾರತಕ್ಕೆ ಖಾತ್ರಿಯಾದರಷ್ಟೇ ಅದು ಸಾಧ್ಯವಾಗಲಿದೆ' ಎಂದು ಚೀನಾವನ್ನು ಉದ್ದೇಶಿಸಿ ಖಚಿತವಾಗಿ ಹೇಳಿದ್ದಾರೆ.

'ಉದ್ವಿಗ್ನತೆ ಶಮನದ ಬಳಿಕ, ಗಡಿ ಪ್ರದೇಶದ ನಿರ್ವಹಣೆ ಕುರಿತು ಚರ್ಚಿಸಲಾಗುವುದು' ಎಂದು ತಿಳಿಸಿದ್ದಾರೆ.

ರಷ್ಯಾದ ಕಜಾನ್‌ನಲ್ಲಿ ಇತ್ತೀಚೆಗೆ ನಡೆದ 'ಬ್ರಿಕ್ಸ್‌' ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್‌ ಅವರು ಅಕ್ಟೋಬರ್‌ 23ರಂದು ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಸೇನೆಯ ಹಿಂತೆಗೆತ ಮತ್ತು ಗಸ್ತು ತಿರುಗುವಿಕೆ ಸಂಬಂಧಿಸಿದಂತೆ ಒಪ್ಪಂದವನ್ನು ಅನುಮೋದಿಸಿದ್ದರು.

ಪೂರ್ವ ಲಡಾಖ್‌ನ ಎಲ್‌ಎಸಿ ಬಳಿ ನಾಲ್ಕು ವರ್ಷಗಳ ಹಿಂದೆ ಇದ್ದ ಗಸ್ತು ವ್ಯವಸ್ಥೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಚೀನಾ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ ಅಕ್ಟೋಬರ್‌ 21ರಂದು ಪ್ರಕಟಿಸಿತ್ತು.

‘ಮುಂಬೈ ದಾಳಿ–ಭಾರತ ಪ್ರತಿಕ್ರಿಯಿಸಿರಲಿಲ್ಲ’

‘2008ರ ನವೆಂಬರ್‌ 28ರಂದು ಮುಂಬೈನ ಮೇಲೆ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇಂತಹ ಘಟನೆಗಳು ಪುನಾರವರ್ತನೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಜೈಶಂಕರ್‌ ತಿಳಿಸಿದ್ದಾರೆ.

‘ಮುಂಬೈನಲ್ಲಿ ಅಂತಹ ಘಟನೆಗಳು ಮರುಕಳಿಸಬಾರದು. ಭಯೋತ್ಪಾದನೆ ನಿಗ್ರಹಿಸುವ ನಿಟ್ಟಿನಲ್ಲಿ ಭಾರತ ಹಾಗೂ ವಿಶ್ವಕ್ಕೆ ಮುಂಬೈ ಸಂಕೇತವಾಗಿದೆ’ ಎಂದರು.

‘ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಭಾರತ ಸೇರ್ಪಡೆಗೊಂಡ ಬಳಿಕ ಭಯೋತ್ಪಾದನಾ ನಿಗ್ರಹ ಸಮಿತಿಯ ಸಭೆಯನ್ನು ಮುಂಬೈನಲ್ಲಿ ಭಯೋತ್ಪಾದನಾ ದಾಳಿಗೆ ಒಳಗಾದ  ಹೋಟೆಲ್‌ನಲ್ಲಿಯೇ ನಡೆಸಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಭಯೋತ್ಪಾದನೆಯನ್ನು ಭಾರತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಮಗೆ ಯಾರಾದರೂ ಏನಾದರೂ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಬೆಳಿಗ್ಗೆ ವ್ಯವಹಾರದ ಮಾತನಾಡಿ ರಾತ್ರಿ ವೇಳೆ ಭಯೋತ್ಪಾದನೆ ಬೆಂಬಲಿಸಿದರೆ ಅಂತಹ ನಡವಳಿಕೆಯನ್ನು ಸಹಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.