ಇಟಾನಗರ: ಭಾರತ ಮತ್ತು ಚೀನಾ ನಡುವೆ ಮೂಡಿದ ಸಹಮತದ ಆಧಾರದಲ್ಲಿ, ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಕೆಲವು ಕಡೆಗಳಲ್ಲಿ ಎರಡೂ ಕಡೆಯ ಯೋಧರ ವಾಪಸಾತಿ ಪ್ರಕ್ರಿಯೆಯು ‘ಬಹುತೇಕ ಪೂರ್ಣಗೊಂಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ತಿಳಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯ ಅನಾವರಣ ಹಾಗೂ ಮೇಜರ್ ರಾಲೆಂಗನಾವೋ ‘ಬಾಬ್’ ಖಟಿಂಗ್ ಶೌರ್ಯ ವಸ್ತುಸಂಗ್ರಹಾಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಎಲ್‌ಎಸಿಯ ಕೆಲವು ಸ್ಥಳಗಳ ವಿಚಾರವಾಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತ ಮತ್ತು ಚೀನಾದ ಸೇನಾ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ಅಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿವೆ. ಇದರ ಪರಿಣಾಮವಾಗಿ, ಪರಸ್ಪರರ ರಕ್ಷಣೆಗೆ ಸಂಬಂಧಿಸಿ ಸಹಮತವೊಂದು ಮೂಡಿತು’ ಎಂದು ಅವರು ಹೇಳಿದರು.
‘ಈ ಸಹಮತದ ಆಧಾರದಲ್ಲಿ ಸೇನಾಪಡೆಯ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದೆ. ಸೇನೆಯ ವಾಪಸಾತಿಯ ಆಚೆಗೂ ಹೆಜ್ಜೆ ಇರಿಸುವ ಉದ್ದೇಶ ನಮಗೆ ಇದೆ. ಆದರೆ, ಅದಕ್ಕೆ ತುಸು ಹೆಚ್ಚು ಕಾಯಬೇಕು’ ಎಂದರು.
ಪ್ರತಿಕೂಲ ವಾತಾವರಣದ ಕಾರಣಕ್ಕೆ ಸಿಂಗ್ ಅವರಿಗೆ ತವಾಂಗ್‌ಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಪ್ರತಿಮೆಯನ್ನು ಮತ್ತು ವಸ್ತುಸಂಗ್ರಹಾಲಯವನ್ನು ಅಸ್ಸಾಂನ ತೇಜಪುರದಿಂದ ಆನ್‌ಲೈನ್ ಮೂಲಕ ಉದ್ಘಾಟಿಸಿದರು.
ಮೇಜರ್ ಬಾಬ್ ಖಟಿಂಗ್ ಅವರು 1951ರ ಫೆಬ್ರುವರಿಯಲ್ಲಿ ಮಕ್‌ಮಹೋನ್ ರೇಖೆಯವರೆಗೆ ಭಾರತದ ಆಡಳಿತವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸಿಂಗ್ ಹೇಳಿದರು. ‘ತವಾಂಗ್ ಪ್ರದೇಶವು ಭಾರತದ ಜೊತೆ ಶಾಂತಿಯುತವಾಗಿ ವಿಲೀನ ಆಗುವುದಕ್ಕೆ ಮೇಜರ್ ಖಟಿಂಗ್ ಅವರು ನೇತೃತ್ವ ವಹಿಸಿದ್ದಷ್ಟೇ ಅಲ್ಲದೆ, ಅಗತ್ಯವಿರುವ ಮಿಲಿಟರಿ ಹಾಗೂ ಭದ್ರತಾ ಚೌಕಟ್ಟನ್ನು ಕೂಡ ಅವರು ರೂಪಿಸಿದರು’ ಎಂದು ಸ್ಮರಿಸಿದರು.
ಸಿಂಗ್ ಅವರು ಪಟೇಲ್ ಪ್ರತಿಮೆಗೆ ಗೌರವ ಸಲ್ಲಿಸಿದರು. ‘ದೇಶದ ವಲ್ಲಭ ಎಂಬ ಹೆಸರಿನ ಈ ಪ್ರತಿಮೆಯು ಒಗ್ಗಟ್ಟಿನಲ್ಲಿ ಇರುವ ಶಕ್ತಿಯ ಬಗ್ಗೆ ಜನರಿಗೆ ನೆನಪಿಸಿಕೊಡಲಿದೆ’ ಎಂದರು.
ಭಾರತ ಚೀನಾ ಯೋಧರಿಂದ ಸಿಹಿ ವಿನಿಮಯ
ವಾಸ್ತವ ಗಡಿ ನಿಯಂತ್ರಣ ರೇಖೆಯ ಹಲವು ಕಡೆಗಳಲ್ಲಿ ಭಾರತ ಮತ್ತು ಚೀನಾದ ಯೋಧರು ಗುರುವಾರ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ವಿನಿಮಯ ಮಾಡಿಕೊಂಡರು. ಸಂಘರ್ಷಕ್ಕೆ ಕಾರಣವಾಗಿದ್ದ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಎರಡೂ ಕಡೆಯ ಯೋಧರ ವಾಪಸಾತಿ ಬುಧವಾರ ಪೂರ್ಣಗೊಂಡಿದೆ. ಇದಾದ ಮಾರನೆಯ ದಿನ ಎರಡೂ ದೇಶಗಳ ಯೋಧರು ಪರಸ್ಪರ ಸಿಹಿ ತಿನಿಸು ವಿನಿಮಯ ಮಾಡಿಕೊಂಡರು. ಸಿಹಿ ವಿನಿಮಯ ನಡೆದಿದೆ ಎಂಬ ಸಂಗತಿಯನ್ನು ಭಾರತೀಯ ಸೇನೆಯ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. ಅರುಣಾಚಲ ಪ್ರದೇಶದ ಬುಮ್‌ಲಾ ವಾಚಾ/ಕಿಬಿಥೂ; ಲಡಾಖ್‌ನ ಚುಶುಲ್–ಮೊಲ್ಡೊ ಮತ್ತು ದೌಲತ್ ಬೆಗಾ ಓಲ್ಡಿ; ಸಿಕ್ಕಿಂನ ನಾಥು ಲಾನಲ್ಲಿ ಸಿಹಿ ವಿನಿಮಯ ನಡೆದಿದೆ. ಸ್ಥಳೀಯ ಕಮಾಂಡ್‌ರಗಳ ಹಂತದಲ್ಲಿ ಮಾತುಕತೆಗಳು ಮುಂದುವರಿಯಲಿವೆ ಎಂದು ಸೇನಾ ಮೂಲಗಳು ಹೇಳಿವೆ. ಹಬ್ಬಗಳ ಸಂದರ್ಭದಲ್ಲಿ ಹಾಗೂ ಇತರ ಪ್ರಮುಖ ದಿನಗಳಂದು ಭಾರತ ಮತ್ತು ಚೀನಾದ ಯೋಧರು ಎಲ್‌ಎಸಿಯ ವಿವಿಧ ಸ್ಥಳಗಳಲ್ಲಿ ಮೊದಲಿನಿಂದಲೂ ಸಿಹಿ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.