ಲಡಾಕ್: ಪೂರ್ವ ಲಡಾಖ್‌ನ ಪ್ಯಾಂಗೊಂಗ್ ಸರೋವರದ ಸುತ್ತಮುತ್ತ ಚೀನಾ ಮತ್ತು ಭಾರತ ಕಡೆಯಿಂದ ಜಮಾವಣೆಯಾಗಿದ್ದ ಶಸ್ತ್ರಸಜ್ಜಿತ ಸೇನೆ, ಉದ್ಧೋಪಕರಣಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ ಎಂದು ಸೇನೆ ಮೂಲಗಳು ಪಿಟಿಐಗೆ ತಿಳಿಸಿವೆ.
ಯುದ್ಧ ಟ್ಯಾಂಕರ್‌ಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳಂತಹ ಶಸ್ತ್ರಸಜ್ಜಿತ ಅಂಶಗಳನ್ನು ಪಾಂಗೊಂಗ್ ಸರೋವರದ ದಕ್ಷಿಣ ದಂಡೆಯಲ್ಲಿರುವ ಘರ್ಷಣೆಯ ಸ್ಥಳಗಳಿಂದ ಹಿಂತೆಗೆದುಕೊಳ್ಳಲಾಗುತ್ತಿದ್ದರೆ, ಸರೋವರದ ಉತ್ತರ ದಂಡೆಯಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ಯಾಂಗೊಂಗ್ ಸರೋವರದ ದಕ್ಷಿಣ ದಂಡೆಯಿಂದ ಶಸ್ತ್ರಸಜ್ಜಿತ ಅಂಶಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಮುಂದಿನ ಕೆಲವು ದಿನಗಳಲ್ಲಿ ಎರಡೂ ಕಡೆಯಿಂದ ನಿರ್ಮಿಸಲಾದ ತಾತ್ಕಾಲಿಕ ರಚನೆಗಳನ್ನು ನೆಲಸಮ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
"ಸೇನೆ ಮತ್ತು ಮಿಲಿಟರಿ ಯಂತ್ರಾಂಶಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಎರಡೂ ಕಡೆಯವರು ಒಟ್ಟಾಗಿ ಪರಿಶೀಲನೆ ನಡೆಸುತ್ತಿರುವುದರಿಂದ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ಸಮಯ ತೆಗೆದುಕೊಳ್ಳುತ್ತದೆ" ಎಂದು ಮೂಲವೊಂದು ತಿಳಿಸಿದೆ.
ಸೇನೆ ಹಿಂತೆಗೆತ ಮತ್ತು ಶಸ್ತ್ರಸಜ್ಜಿತ ಅಂಶಗಳ ನಿಷ್ಕ್ರಿಯತೆಯು ಉಭಯ ರಾಷ್ಟ್ರಗಳ ಸೇನೆ ಮುಖಾಮುಖಿಯಾಗಿದ್ದ ಪ್ರಕ್ಷುಬ್ಧ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂಬತ್ತು ತಿಂಗಳಿಂದ ಏರ್ಪಟ್ಟಿದ್ದ ಪ್ರಕ್ಷುಬ್ಧ ವಾತಾವರಣದ ಬಳಿಕ ಉಭಯ ದೇಶಗಳ ಮಿಲಿಟರಿ ಮಾತುಕತೆಯಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಲ್ಲಿ ಸೇನೆ ಜಮಾವಣೆ ಹಿಂತೆಗೆದುಕೊಳ್ಳುವ ಒಪ್ಪಂದಕ್ಕೆ ಬರಲಾಗಿತ್ತು.
ಸೇನೆ ಹಿಂತೆಗೆತ ಒಪ್ಪಂದದ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಸತ್ತಿನಲ್ಲಿ ವಿವರವಾದ ಹೇಳಿಕೆ ನೀಡಿದ್ದರು.
ಒಪ್ಪಂದದ ಪ್ರಕಾರ, ಚೀನಾ ತನ್ನ ಸೈನ್ಯವನ್ನು ಉತ್ತರ ದಂಡೆಯ ಫಿಂಗರ್ 8 ಪ್ರದೇಶಗಳ ಪೂರ್ವಕ್ಕೆ ಹಿಂತೆಗೆದುಕೊಳ್ಳಬೇಕಿದೆ. ಭಾರತೀಯ ಸಿಬ್ಬಂದಿ ಈ ಪ್ರದೇಶದ ಫಿಂಗರ್ 3 ಬಳಿಯ ಧಾನ್ ಸಿಂಗ್ ಥಾಪಾ ಪೋಸ್ಟ್‌ನಲ್ಲಿರುವ ತಮ್ಮ ಶಾಶ್ವತ ನೆಲೆಯಲ್ಲಿ ನೆಲೆಸಲಿದೆ.
ಸರೋವರದ ದಕ್ಷಿಣ ದಂಡೆಯಲ್ಲೂ ಇದೇ ರೀತಿಯ ಪ್ರಕ್ರಿಯೆ ನಡೆಯಲಿದೆ ಎಂದು ಸಿಂಗ್ ಸಂಸತ್ತಿನಲ್ಲಿ ತಿಳಿಸಿದ್ದರು.
ಕಳೆದ ವರ್ಷ, ಚೀನಾದ ಮಿಲಿಟರಿ ಫಿಂಗರ್ 4 ಮತ್ತು 8 ರ ನಡುವಿನ ಪ್ರದೇಶಗಳಲ್ಲಿ ಹಲವಾರು ಬಂಕರ್ ಮತ್ತು ಇತರ ರಚನೆಗಳನ್ನು ನಿರ್ಮಿಸಿತ್ತು. ಫಿಂಗರ್ 4 ಅನ್ನು ಮೀರಿದ ಎಲ್ಲ ಭಾರತೀಯ ಗಸ್ತುಗಳನ್ನು ನಿರ್ಬಂಧಿಸಿತ್ತು, ಹಾಗಾಗಿ, ಇದು ಭಾರತೀಯ ಸೇನೆಯಿಂದ ಬಲವಾದ ಪ್ರತಿರೋಧಕ್ಕೆ ಕಾರಣವಾಯಿತು.
ಒಂಬತ್ತು ಸುತ್ತಿನ ಮಿಲಿಟರಿ ಮಾತುಕತೆಗಳಲ್ಲಿ, ಪ್ಯಾಂಗೊಂಗ್ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 4 ರಿಂದ ಫಿಂಗರ್ 8 ರವರೆಗೆ ಚೀನಾದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತ ನಿರ್ದಿಷ್ಟವಾಗಿ ಒತ್ತಾಯಿಸುತ್ತಿತ್ತು.
ಸೇನೆ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ವಿವಾದಿತ ವಿಷಯಗಳ ಕುರಿತು ಉಭಯ ಕಡೆಯವರು ಮಾತುಕತೆ ನಡೆಸಲಿವೆ. ಎರಡೂ ಕಡೆಯ ಫೀಲ್ಡ್ ಕಮಾಂಡರ್‌ಗಳು ಕಳೆದ ಕೆಲವು ದಿನಗಳಿಂದ ಪ್ರತಿದಿನವೂ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಪ್ಪಂದದ ಅನುಷ್ಠಾನವು ಬುಧವಾರದಿಂದ ಪ್ರಾರಂಭವಾಗಿದೆ. ಉಳಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಸೇನೆ ಹಿಂತೆಗೆತ ಪೂರ್ಣಗೊಂಡ 48 ಗಂಟೆಗಳ ಒಳಗೆ ಎರಡೂ ಕಡೆಯ ಹಿರಿಯ ಕಮಾಂಡರ್‌ಗಳ ಮುಂದಿನ ಸಭೆಯನ್ನು ಕರೆಯಲು ಒಪ್ಪಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಉಭಯ ದೇಶಗಳ ಮಿಲಿಟರಿ ಕಮಾಂಡರ್‌ಗಳ ನಡುವಿನ ಮುಂಬರುವ ಮಾತುಕತೆಯಲ್ಲಿ ಡೆಪ್ಸಾಂಗ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಸೇರಿದಂತೆ ಇತರ ಪ್ರಮುಖ "ಸಮಸ್ಯೆಗಳ" ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.