ಬೆಂಗಳೂರು: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ 'ಟೂಲ್‌ಕಿಟ್' ಸಿದ್ಧಪಡಿಸಿದ್ದ ಆರೋಪದಲ್ಲಿ ಬೆಂಗಳೂರಿನ 21 ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ.
ದಿಶಾ ರವಿ ಬಂಧನದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ನಡುವೆ ಉಗ್ರ ಅಜ್ಮಲ್ ಕಸಬ್ (Ajmal Kasab) ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಕಸಬ್‌ನ ವಯಸ್ಸು ಮತ್ತು ದಿಶಾ ವಯಸ್ಸು ಹೋಲಿಕೆ ಮಾಡಿ ಟ್ವೀಟ್‌ಗಳು ಪ್ರಕಟಿಸಲಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ಸಹ ಇಂಥದ್ದೇ ಹೋಲಿಕೆಯ ಟ್ವೀಟ್ ಮಾಡಿದ್ದಾರೆ.
'ಬುರ್ಹಾನ್ ವಾನಿ 21 ವರ್ಷದವನು, ಅಜ್ಮಲ್ ಕಸಬ್ 21 ವರ್ಷದವನು. ಪ್ರಾಯ ಕೇವಲ ಒಂದು ಸಂಖ್ಯೆ ಮಾತ್ರ. ಕಾನೂನಿಗಿಂತ ಮಿಗಿಲಾಗಿ ಯಾರೂ ಇಲ್ಲ. ಕಾನೂನು ತನ್ನದೇ ಹಾದಿಯಲ್ಲಿ ಸಾಗುತ್ತದೆ. ಅಪರಾಧವು ಅಪರಾಧವೇ ಆಗಿದೆ..' ಎಂದು ಉಲ್ಲೇಖಿಸಿದ್ದಾರೆ.
ಅಜ್ಮಲ್ ಕಸಬ್ ಹೆಸರು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು,ಟ್ವೀಟಿಗರು ಇಂಥದ್ದೇ ಸಾರಾಂಶವಿರುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ದಿಶಾ ರವಿ ವಿರುದ್ಧ ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರೈತರ ಪ್ರತಿಭಟನೆಯನ್ನು ಬೆಂಬಲಿಸಲು ದಿಶಾ ರವಿ ಟೂಲ್‌ಕಿಟ್ ಸಿದ್ಧಪಡಿಸಿ ಬಳಿಕ ಅದನ್ನು ತಿದ್ದಿದ್ದರು ಎಂದು ಆರೋಪಿಸಲಾಗಿದೆ. ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಹಲವು ಗಣ್ಯರು ಈ ಟೂಲ್‌ಕಿಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು.
ಜನವರಿ 26 ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಅಲ್ಲದೆ ಗುಂಪೊಂದು ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.