ನವದೆಹಲಿ: ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಗೂಗಲ್ ‘ಟೂಲ್‌ಕಿಟ್’ ಅನ್ನು ಗ್ರೇಟಾ ಥನ್‌ಬರ್ಗ್ ಜೊತೆ ಹಂಚಿಕೊಂಡಿದ್ದರು ಎಂದು ದೆಹಲಿ ಪೊಲೀಸರು ಭಾನುವಾರ ಸಂಜೆ ಹೇಳಿಕೆ ನೀಡಿದ್ದಾರೆ.
ದಿಶಾ ರವಿ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಅಧಿಕಾರಿಗಳು, 'ದಿಶಾ ರವಿ ಅವರು ಗೂಗಲ್ ಟೂಲ್‌ಕಿಟ್ ಡಾಕ್ಯುಮೆಂಟ್‌ನ ಸಂಪಾದಕರಾಗಿದ್ದಾರೆ. ಟೂಲ್‌ಕಿಟ್ ಹಂಚಿಕೆ ಹಾಗೂ ಪ್ರಸಾರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ವಾಟ್ಸ್ಆ್ಯಪ್ ಗುಂಪನ್ನು ಪ್ರಾರಂಭಿಸಿದ್ದರು. ಅದರ ಮೂಲಕ ಟೂಲ್‌ಕಿಟ್ ತಯಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದರು' ಎಂದು ತಿಳಿಸಿದ್ದಾರೆ.
ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಜೊತೆ ದಿಶಾ ರವಿ ಅವರು ಟೂಲ್‌ಕಿಟ್ ಅನ್ನು ಹಂಚಿಕೊಂಡಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಪರಿಸರ ಕಾರ್ಯಕರ್ತೆ, 21 ವರ್ಷದ ದಿಶಾ ರವಿ ಅವರನ್ನು ದೆಹಲಿಯ ಸೈಬರ್ ಪೊಲೀಸರು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದರು.
ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರು ಟ್ವೀಟ್‌ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಹೇಗೆ ಎಂಬುದನ್ನು ವಿವರಿಸುವ ‘ಟೂಲ್‌ಕಿಟ್’ ಅನ್ನು ಹಂಚಿಕೊಂಡಿದ್ದರು. ಇದರ ಸೃಷ್ಟಿಕರ್ತರಿಗೆ ಸಂಬಂಧಿಸಿದ ಇಮೇಲ್ ಐಡಿ, ಯುಆರ್‌ಎಲ್‌ಗಳು ಮತ್ತು ಕೆಲವು ಸಾಮಾಜಿಕ ಮಾಧ್ಯಮಗಳ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಗೂಗಲ್ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನು ಈ ಹಿಂದೆ ಕೇಳಿದ್ದರು.
ಅಲ್ಲದೆ, ಭಾರತ ಸರ್ಕಾರದ ವಿರುದ್ಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಯುದ್ಧ ಸಾರಲಾಗಿದೆ ಎಂದು ಆರೋಪಿಸಿ ದೆಹಲಿ ಸೈಬರ್ ಪೊಲೀಸರು ಖಲಿಸ್ತಾನ ಪರ ಹೋರಾಟಗಾರರು ಮತ್ತು ಟೂಲ್‌ಕಿಟ್ ಸೃಷ್ಟಿಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.