ADVERTISEMENT

ಜ.11ರ ಸಭೆ ಮಾಹಿತಿ ಕೋರಿ ಝೂಮ್‌ಗೆ ಪೊಲೀಸರ ಪತ್ರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 3:08 IST
Last Updated 17 ಫೆಬ್ರುವರಿ 2021, 3:08 IST
ದಿಶಾ ರವಿ
ದಿಶಾ ರವಿ   

ನವದೆಹಲಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಲು ಟೂಲ್‌ಕಿಟ್‌ ರಚಿಸಿದ ಆರೋಪ ಹೊತ್ತಿರುವ ಬೆಂಗಳೂರಿನ ದಿಶಾ ರವಿ, ಮುಂಬೈನ ನಿಕಿತಾ ಜೇಕಬ್‌ ಮತ್ತು ಪುಣೆಯ ಶಾಂತನು ಮುಲುಕ್‌ ಅವರು ಜನವರಿ 11ರಂದು ನಡೆಸಿದ್ದಾರೆ ಎನ್ನಲಾದ ವಿಡಿಯೊ ಕಾನ್ಫರೆನ್ಸ್‌ ಬಗ್ಗೆ ಮಾಹಿತಿ ಕೋರಿ ಝೂಮ್‌ ವೇದಿಕೆಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದಾರೆ.ಖಾಲಿಸ್ತಾನಪರ ಹೋರಾಟದ ಸಂಘಟನೆ ಎಂದು ಗುರುತಿಸಲಾಗಿರುವ ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್ (ಪಿಜೆಎಫ್‌) ಈ ವಿಡಿಯೊ ಕಾನ್ಫರೆನ್ಸ್‌ ಆಯೋಜಿಸಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ಸಭೆಯಲ್ಲಿ 60–70 ಮಂದಿ ಭಾಗಿಯಾಗಿದ್ದು ಎಲ್ಲರ ವಿವರಗಳನ್ನು ಪೊಲೀಸರು ಕೇಳಿದ್ದಾರೆ.

ಟೂಲ್‌ಕಿಟ್‌ ರಚನೆಗೆ ಆರೋಪಿಗಳು ಹಣ ಪಡೆದುಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಹಾಗೆಯೇ, ‘ಇಂಟರ್‌ನ್ಯಾಷನಲ್‌ ಫಾರ್ಮರ್ಸ್‌ ಸ್ಟ್ರೈಕ್‌’ ಎಂಬ ವಾಟ್ಸ್‌ಆ್ಯಪ್‌ ಗುಂಪಿನ ಬಗ್ಗೆಯೂ ಪೊಲೀಸರು ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ.

ADVERTISEMENT

ತಮ್ಮ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಹಾಗಾಗಿ, ಟೂಲ್‌ಕಿಟ್‌ ಇದ್ದ ಪೋಸ್ಟ್‌ ಅನ್ನು ಅಳಿಸಿ ಹಾಕುವಂತೆ ನಿಕಿತಾ ಅವರು ಸ್ವೀಡನ್‌ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಅವರನ್ನು ಕೋರಿದ್ದರುಎಂದು ಪೊಲೀಸರು ಹೇಳಿದ್ದಾರೆ.

ದಿಶಾ ಬಂಧನದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದು ದೆಹಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌. ಶ್ರೀವಾಸ್ತವ ಅವರು ಸಮರ್ಥನೆ ಮಾಡಿಕೊಂಡ ದಿನವೇ ಆಯೋಗವು ನೋಟಿಸ್‌ ನೀಡಿದೆ.

ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತವಾಗಿ ಪೊಲೀಸರಿಗೆ ನೋಟಿಸ್‌ ನೀಡಲಾಗಿದೆ. ‘ಪ್ರಕರಣದ ಗಾಂಭೀರ್ಯವನ್ನು ಗಣನೆಗೆ ತೆಗೆದುಕೊಂಡು’ ಇದೇ ಶುಕ್ರವಾರದ ಒಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ್‌ ಸೂಚಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ ಬಳಿಕ ಅತ್ಯಂತ ಹತ್ತಿರದಲ್ಲಿರುವ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಬೇಕು ಮತ್ತು ಬೇರೆಡೆಗೆ ಕರೆದೊಯ್ಯಬೇಕಿದ್ದರೆ ಪ್ರಯಾಣ ಅನುಮತಿ ಪಡೆಯಬೇಕು ಎಂದು ದೆಹಲಿ ಹೈಕೋರ್ಟ್‌ 2019ರಲ್ಲಿ ಆದೇಶ ನೀಡಿದೆ ಎಂಬುದನ್ನೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಂಧಿತ ವ್ಯಕ್ತಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ತಮ್ಮ ಆಯ್ಕೆಯ ವಕೀಲರನ್ನು ಹೊಂದುವ ಹಕ್ಕು ಇದೆ ಎಂದು ಸಂವಿಧಾನದ 22 (1)ನೇ ವಿಧಿ ಹೇಳುತ್ತದೆ. ಹಾಗಿದ್ದರೂ ದಿಶಾ ಅವರಿಗೆ ವಕೀಲರ ನೆರವು ಏಕೆ ಸಿಕ್ಕಿಲ್ಲ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ದಿಶಾ ವಿರುದ್ಧದ ಎಫ್‌ಐಆರ್‌ನ ಪ್ರತಿಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ದಿಶಾಗೆ ಎಫ್‌ಐಆರ್‌ ಪ್ರತಿ:ಎಫ್‌ಐಆರ್‌ ಪ್ರತಿ, ಬಂಧನ ವಾರಂಟ್‌, ಪೊಲೀಸ್‌ ವಶಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯ ಪ್ರತಿಗಳನ್ನುದಿಶಾ ಅವರಿಗೆ ನೀಡುವಂತೆ ದೆಹಲಿಯ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಬೆಚ್ಚನೆಯ ಉಡುಪು, ಮಾಸ್ಕ್‌ ಮತ್ತು ಪುಸ್ತಕಗಳನ್ನು ಪಡೆದುಕೊಳ್ಳುವುದಕ್ಕೂ ದಿಶಾ ಅವರಿಗೆ ಅವಕಾಶ ಕೊಟ್ಟಿದೆ.

ಪೊಲೀಸ್‌ ಕಸ್ಟಡಿಯಲ್ಲಿ ಇದ್ದಷ್ಟು ದಿನ ಮನೆಯವರೊಂದಿಗೆ 15 ನಿಮಿಷ ದೂರವಾಣಿಯಲ್ಲಿ ಮಾತನಾಡಲು ಮತ್ತು ತಮ್ಮ ವಕೀಲರನ್ನು 30 ನಿಮಿಷ ಭೇಟಿಯಾಗಲು ಕೂಡ ನ್ಯಾಯಾಲಯವು ಅನುಮತಿ ನೀಡಿದೆ. ದಿಶಾ ಅವರನ್ನು ಐದು ದಿನ ಪೊಲೀಸ್‌ ವಶಕ್ಕೆ ನೀಡಲಾಗಿದೆ.

ಶಾಂತನುಗೆ ಜಾಮೀನು
ಟೂಲ್‌ಕಿಟ್‌ ಪ್ರಕರಣದ ಆರೋಪಿ ಶಾಂತನು ಮುಲುಕ್‌ ಅವರಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠವು ಪ್ರಯಾಣಕ್ಕಾಗಿ 10 ದಿನಗಳತಾತ್ಕಾಲಿಕ ನಿರೀಕ್ಷಣಾ ಜಾಮೀನು ನೀಡಿದೆ. ಮತ್ತೊಬ್ಬ ಆರೋಪಿ ನಿಕಿತಾ ಜೇಕಬ್‌ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಯಾಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಅದರ ಬಗ್ಗೆ ಬುಧವಾರ ಆದೇಶ ನೀಡಲಾಗುವುದು ಎಂದು ನ್ಯಾಯಾಲಯವು ಹೇಳಿದೆ.

ದೆಹಲಿಯ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅಲ್ಲಿಗೆ ಹೋಗಲು ಸಾಧ್ಯವಾಗುವಂತೆ ಜಾಮೀನು ಕೋರಿ ಈ ಇಬ್ಬರೂ ಸೋಮವಾರ ಅರ್ಜಿ ಸಲ್ಲಿಸಿದ್ದರು.

ಮಹಿಳಾ ಆಯೋಗದ ನೋಟಿಸ್‌
ಟೂಲ್‌ಕಿಟ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿಶಾ ಅವರನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಏಕೆ ಮತ್ತು ಅವರಿಗೆ ವಕೀಲರ ನೆರವು ಏಕೆ ಒದಗಿಸಿಲ್ಲ ಎಂದು ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ಮಂಗಳವಾರ ನೋಟಿಸ್‌ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.