ನವದೆಹಲಿ: ತುರ್ತು ಕಾರಣ ನೀಡಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ರಾಷ್ಟ್ರ ರಾಜಧಾನಿಯಲ್ಲಿ ನಡೆಯಬೇಕಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ಅವರ ಕಾರ್ಯಕ್ರಮವನ್ನು ಬುಧವಾರ ರದ್ದುಪಡಿಸಿತ್ತು. ಇಂದು ದೆಹಲಿ ಸರ್ಕಾರ ಕಾರ್ಯಕ್ರಮ ನಡೆಸಿಕೊಡುವಂತೆ ಕೃಷ್ಣ ಅವರಿಗೆ ಆಹ್ವಾನ ನೀಡಿದೆ.
’ಕೇಂದ್ರ ಸರ್ಕಾರದ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಕೃಷ್ಣರನ್ನ ಕಾರ್ಯಕ್ರಮಕ್ಕೆ ಕರೆಸಬಾರದು’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗಿದೆ. ಈ ಬೆಳವಣಿಗೆಯ ಬೆನ್ನಲೇ ತುರ್ತು ಕಾರಣಗಳಿಂದಾಗಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಎಎಐ ಬುಧವಾರ ಹೇಳಿತ್ತು.
ಇಲ್ಲಿನ ಚಾಣಕ್ಯಪುರಿಯ ನೆಹರು ಪಾರ್ಕ್‌ನಲ್ಲಿ ನವೆಂಬರ್ 17 ಮತ್ತು 18ರಂದು ಆಯೋಜಿಸಲಾಗಿರುವ ’ಉದ್ಯಾನದಲ್ಲಿ ನೃತ್ಯ ಮತ್ತು ಸಂಗೀತ’ ಕಾರ್ಯಕ್ರಮದಲ್ಲಿ ಕೃಷ್ಣ ಅವರ ಸಂಗೀತ ಕಛೇರಿ ನಿಗದಿಯಾಗಿತ್ತು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಮತ್ತು ಸಾಂಸ್ಕೃತಿ ವೇದಿಕೆ ಸ್ಪಿಕ್–ಮೆಕೆ(SPIC-MACAY) ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿವೆ.
ಟ್ವಿಟರ್‌ನಲ್ಲಿ#DisinviteTMKrishnaಅಭಿಯಾನ
ಕೇಂದ್ರ ಸರ್ಕಾರ,ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧದ ಅವಹೇಳಕಾರಿಯಾಗಿ ಮಾತನಾಡಿದ್ದಾರೆ ಎಂದು ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ.ಕೃಷ್ಣ ವಿರುದ್ಧ ಇತ್ತೀಚೆಗೆ ಅನೇಕ ಟ್ವೀಟಿಗರು ಜರಿದಿದ್ದರು. ಎಎಐ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವುದನ್ನು ವಿರೋಧಿಸಿ, ಕಾರ್ಯಕ್ರಮಕ್ಕೆ ಕರೆಸದಂತೆ #DisinviteTMKrishna ಅಭಿಯಾನವನ್ನೇ ನಡೆಸಿದ್ದರು. ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಭಿಮಾನಿಗಳು ಕೃಷ್ಣ ಅವರನ್ನು ಅರ್ಬನ್ ನಕ್ಸಲ್ ಹ್ಯಾಷ್‌ಟ್ಯಾಗ್‌ನೊಂದಿಗೆ ನಿಂದಿಸಿದ್ದರು. ತಮ್ಮ ಟ್ವೀಟ್‌ಗಳಲ್ಲಿ ಎಎಐ ಅನ್ನು ಟ್ಯಾಗ್ ಮಾಡಿ, ಇಂಥ ವ್ಯಕ್ತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಡಿ ಎಂದು ಒತ್ತಾಯಿಸಿದ್ದರು.
ಮೋದಿ ಸರ್ಕಾರದ ವಿರೋಧಿ, ಕರ್ನಾಟಿಕ್ ರೌಡಿ, ಕರ್ನಾಟಕ ಸಂಗಿತದ ಪಾವಿತ್ರ್ಯ ಹಾಳು ಮಾಡಿದವನು,...ಹೀಗೆ ಅನೇಕ ಮಾತುಗಳಲ್ಲಿ ಕೃಷ್ಣ ಅವರನ್ನು ಟೀಕಿಸಿ ಟ್ವೀಟ್ ಮಾಡಲಾಗಿದೆ.
ಟ್ವಿಟರ್ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೃಷ್ಣ, ಪ್ರಜಾಪ್ರಭುತ್ವದ ಕಲ್ಪನೆಯೇ ಇಲ್ಲದ ವ್ಯಕ್ತಿಗಳು ’ಅರ್ಬನ್ ನಕ್ಸಲ್, ಪ್ರೆಸ್ಟಿಟ್ಯೂಟ್, ಆ್ಯಂಟಿ ಇಂಡಿಯನ್’ ನಂತಹ ಶಬ್ದಗಳನ್ನು ಸೃಷ್ಟಿಸುತ್ತಿದ್ದಾರೆ. ನಿಮ್ಮನ್ನು ಹೆದರಿಸುವುದು ಹಾಗೂ ಮತ್ತೊಬ್ಬರು ನಿಮ್ಮ ವಿರುದ್ಧ ಕುಪಿತರಾಗುವಂತೆ ಮಾಡುವುದು ಅವರ ಉದ್ದೇಶ. ಉತ್ಸವವನ್ನು ರದ್ದುಪಡಿಸಲು ಇಂದು ಅವರು ಈ ಕಾರಣಗಳನ್ನು ನೀಡುತ್ತಿದ್ದಾರೆ ಎಂದರು.
ಅವತ್ತೇ ಕಛೇರಿ ನಡೆಸಿಕೊಡಿ..
ಕೃಷ್ಣ ಸಂಗೀತ ಕಾರ್ಯಕ್ರಮ ನಡೆಯಬೇಕಿದ್ದ ನವೆಂಬರ್ 17ರಂದೇ ಕಛೇರಿ ನಡೆಸಿಕೊಡುವಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಳಿದ್ದಾರೆ. ಸಂಸ್ಕೃತಿ, ಕಲೆ ಮತ್ತು ಭಾಷೆಗಳ ಸಚಿವರೂ ಆಗಿರುವ ಸಿಸೋಡಿಯಾ ಗುರುವಾರ ಫೋನ್ ಮುಖೇನ ಕೃಷ್ಣ ಅವರನ್ನು ಸಂಪರ್ಕಿಸಿದ್ದಾರೆ.
ಕಲಾವಿದರ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡದ್ದನ್ನು ನಮ್ಮ ಸರ್ಕಾರ ಗಮನಿಸಿದೆ. ಈಗಲೇ ಅವರನ್ನು ಸಂಪರ್ಕಿಸಿದ್ದು, ದಿನಾಂಕ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಸಿಸೋಡಿಯಾ ಅವರ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ದೆಹಲಿ ಸರ್ಕಾರದಿಂದ ಆಹ್ವಾನ ಬಂದಿರುವುದಾಗಿ ಕೃಷ್ಣ ಸ್ಪಷ್ಟಪಡಿಸಿದ್ದು, ಸ್ಥಳ ಮತ್ತು ಸಮಯ ನಿಗದಿಯಾಗಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
2015ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನಿ ಗಾಯಕ ಗುಲಾಮ್ ಅಲಿ ಅವರ ಕಾರ್ಯಕ್ರಮ ಮುಂಬೈನಲ್ಲಿ ನಿಗದಿಯಾಗಿತ್ತು. ಆದರೆ, ಶಿವ ಸೇನೆಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲಾಗಿತ್ತು. ಆಗಲೂ ದೆಹಲಿ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮ ನೀಡುವಂತೆ ಆಹ್ವಾನಿಸಿತ್ತಾದರೂ, ಪ್ರದರ್ಶನ ನಡೆದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.