ADVERTISEMENT

ರಾಹುಲ್‌ ಗಾಂಧಿ ಅನರ್ಹತೆ: ಬಿಜೆಪಿ–ಕಾಂಗ್ರೆಸ್ ಜಟಾಪಟಿ ಬಿರುಸು

ಪಿಟಿಐ
Published 25 ಮಾರ್ಚ್ 2023, 19:17 IST
Last Updated 25 ಮಾರ್ಚ್ 2023, 19:17 IST
ರಾಹುಲ್ ಗಾಂಧಿ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶನಿವಾರ ಮಾತನಾಡಿದರು. ಪ‍ಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಜೊತೆಗಿದ್ದರು  –ಪಿಟಿಐ ಚಿತ್ರ
ರಾಹುಲ್ ಗಾಂಧಿ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶನಿವಾರ ಮಾತನಾಡಿದರು. ಪ‍ಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರು ಜೊತೆಗಿದ್ದರು  –ಪಿಟಿಐ ಚಿತ್ರ   

ಮಾನನಷ್ಟ ಪ್ರಕರಣವೊಂದರಲ್ಲಿ ಸೂರತ್‌ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಂಡಿದೆ. ಅದಾನಿ ಕುರಿತು ಸಂಸತ್‌ನಲ್ಲಿ ತಾವು ಆಡಿರುವ ಮಾತಿನಿಂದಾಗಿಯೇ ತಮ್ಮನ್ನು ಅನರ್ಹಗೊಳಿಸಲಾಗಿದೆ ಎಂದು ರಾಹುಲ್‌ ಆಪಾದಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ. ಶಿಕ್ಷೆಗೆ ತಡೆಯಾಜ್ಞೆ ತರುವ ಪ್ರಯತ್ನವನ್ನೂ ಕಾಂಗ್ರೆಸ್‌ ಮಾಡಿಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ರಾಹುಲ್‌ ಅನರ್ಹತೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ

‘ಅದಾನಿ ಕುರಿತ ಮಾತಿನಿಂದ ಸರ್ಕಾರಕ್ಕೆ ದಿಗಿಲು’

ನವದೆಹಲಿ: ಸಂಸತ್‌ ಸದಸ್ಯತ್ವದಿಂದ ಜೀವನಪೂರ್ತಿ ಅನರ್ಹಗೊಳಿಸಿ ಅಥವಾ ಜೀವನವಿಡೀ ಜೈಲಿಗೆ ತಳ್ಳಿದರೂ ದೇಶದ ಪ್ರಜಾಸತ್ತಾತ್ಮಕ ಸ್ವರೂಪದ ರಕ್ಷಣೆಗೆ ಹೋರಾಡುವುದನ್ನು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ದಿಗಿಲುಗೊಂಡಿರುವ ಸರ್ಕಾರವು ತಮ್ಮನ್ನು ಅನರ್ಹಗೊಳಿಸುವ ಮೂಲಕ ವಿರೋಧ ಪಕ್ಷಗಳ ಕೈಗೆ ಅಸ್ತ್ರವೊಂದನ್ನು ನೀಡಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಮೊದಲ ಬಾರಿ ಮಾಧ್ಯಮಗೋಷ್ಠಿ ಉದ್ದೇಶಿಸಿ ರಾಹುಲ್ ಅವರು ಶನಿವಾರ ಮಾತನಾಡಿದರು. ಅದಾನಿ ಪ್ರಕರಣ ಕುರಿತು ತಾವು ಮುಂದೆ ಮಾಡಬಹುದಾಗಿದ್ದ ಭಾಷಣಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಅನರ್ಹಗೊಳಿಸಿದ್ದಾರೆ. ಅದಾನಿ ಪ್ರಕರಣದಲ್ಲಿ ಸರ್ಕಾರಕ್ಕೆ ಆಗಿರುವ ದಿಗಿಲಿನಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಈ ಇಡೀ ಆಟ ನಡೆದಿದೆ ಎಂದೂ ರಾಹುಲ್ ಆರೋಪಿಸಿದ್ದಾರೆ.

ಅದಾನಿ ಷೆಲ್‌ ಕಂಪನಿಗಳಲ್ಲಿ ₹20 ಸಾವಿರ ಕೋಟಿ ಹೂಡಿಕೆ ಮಾಡಿದವರು ಯಾರು ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇರುವುದಾಗಿಯೂ ರಾಹುಲ್ ಹೇಳಿದ್ದಾರೆ.

‘ಭಾರತದ ಜನರ ಪ್ರಜಾಸತ್ತಾತ್ಮಕ ಧ್ವನಿಯನ್ನು ರಕ್ಷಿಸುವುದಕ್ಕಾಗಿ ನಾನು ಇಲ್ಲಿ ಇದ್ದೇನೆ. ಈ ಕೆಲಸವನ್ನು ಮುಂದುವರಿಸುತ್ತೇನೆ. ಅನರ್ಹತೆ, ಆರೋಪಗಳು, ಶಿಕ್ಷೆ ಮುಂತಾದ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಈ ಜನರಿಗೆ ನಾನು ಇನ್ನೂ ಅರ್ಥ ಆಗಿಲ್ಲ. ನಾನು ಅವರ ಕುರಿತು ಭೀತಿ ಹೊಂದಿಲ್ಲ’ ಎಂದು ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್‌ ಅದಾನಿ ನಡುವಣ ನಂಟು ಏನು ಎಂಬ ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

‘ಅತ್ಯಂತ ದೊಡ್ಡ ಅಸ್ತ್ರವನ್ನು ವಿರೋಧ ಪಕ್ಷಗಳಿಗೆ ಸರ್ಕಾರವು ಕೊಟ್ಟಿದೆ. ಏಕೆಂದರೆ, ಜನರ ಮನಸ್ಸಿನಲ್ಲಿ ಪ್ರಶ್ನೆ ಇದೆ. ಅದಾನಿ ಭ್ರಷ್ಟ ಎಂಬುದು ಜನರಿಗೆ ತಿಳಿದಿದೆ. ಪ್ರಶ್ನೆ ಏನು ಎಂದರೆ, ಭ್ರಷ್ಟ ವ್ಯಕ್ತಿಯನ್ನು ಪ್ರಧಾನಿ ರಕ್ಷಿಸುತ್ತಿರುವುದು ಏಕೆ ಎಂಬುದಾಗಿದೆ’ ಎಂದು ರಾಹುಲ್‌ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅದಾನಿಯೇ ದೇಶ, ದೇಶವೇ ಅದಾನಿ ಎಂದೂ ಅವರು ಆರೋಪಿಸಿದ್ದಾರೆ.

2019ರಲ್ಲಿ ರಾಹುಲ್‌ ನೀಡಿದ್ದ ಹೇಳಿಕೆಯು ಒಬಿಸಿಗಳಿಗೆ ಮಾಡಿದ ಅವಮಾನ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಾವು ಸದಾ ಭ್ರಾತೃತ್ವದ ಕುರಿತು ಮಾತನಾಡಿದ್ದೇನೆ. ಇಲ್ಲಿರುವ ವಿಷಯವು ಒಬಿಸಿ ಅಲ್ಲ, ಅದಾನಿ ಮತ್ತು ಸರ್ಕಾರದ ನಡುವಣ ನಂಟು ಎಂದು ಹೇಳಿದರು.

ನನ್ನ ಹೆಸರು ಸಾವರ್ಕರ್ ಅಲ್ಲ, ಗಾಂಧಿ ಎಂಬುದಾಗಿದೆ. ಗಾಂಧಿ ಎಂದಿಗೂ ಕ್ಷಮೆ ಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.

ಚುನಾವಣೆ ಲಾಭಕ್ಕೆ ಅನರ್ಹತೆ ಬಳಕೆ: ಬಿಜೆಪಿ

ಪಟ್ನಾ: ಅದಾನಿ ಪ್ರಕರಣದ ಕುರಿತು ತಾವು ಕೇಳಿದ ಪ್ರಶ್ನೆಯಿಂದ ಪ್ರಧಾನಿ ನರೇಂದ್ರ ಮೋದಿ ಭೀತರಾಗಿದ್ದಾರೆ. ಹಾಗಾಗಿ ತಮ್ಮನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ ಎಂದು ರಾಹುಲ್‌ ಗಾಂಧಿ ಮಾಡಿರುವ ಆರೋಪವನ್ನು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಅವರು ಅಲ್ಲಗಳೆದಿದ್ದಾರೆ.

ರಾಹುಲ್ ಅವರ ಮಾಧ್ಯಮಗೋಷ್ಠಿಯ ಬಳಿಕ ರವಿಶಂಕರ್ ಪ್ರಸಾದ್ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದರು.

ಮಾನನಷ್ಟ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯವು ತೀರ್ಪು ಪ್ರಕಟಿಸಿದ ತಕ್ಷಣವೇ ಅದಕ್ಕೆ ತಡೆಯಾಜ್ಞೆ ತರುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಲಿಲ್ಲ. ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಇದನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

‘ಕಾಂಗ್ರೆಸ್‌ನ ಸುಪ್ರಸಿದ್ಧ ಕಾನೂನು ತಜ್ಞರ ತಂಡದ ಸೇವೆಯನ್ನು ಉದ್ದೇಶಪೂರ್ವಕವಾಗಿಯೇ ಬಳಸಿಕೊಂಡಿಲ್ಲ ಎಂಬುದು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಯಿಂದ ದೃಢವಾಗುತ್ತದೆ. ಕರ್ನಾಟಕದ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಹೀಗೆ ಮಾಡಲಾಗಿದೆ. ಪವನ್‌ ಖೇರಾ ಪ್ರಕರಣದಲ್ಲಿ ಅತ್ಯಂತ ಚುರುಕಿನಿಂದ ಕೆಲಸ ಮಾಡಿದ್ದವರು ಈ ಬಾರಿ ಹೀಗೆ ಮಾಡಿದ್ದನ್ನು ಬೇರೆ ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ.

‘ನಾವು ಅದಾನಿ ಪರವಾಗಿ ಮಾಡನಾಡಲು ಇಲ್ಲಿಗೆ ಬಂದಿಲ್ಲ. ಆದರೆ, ಅನರ್ಹತೆ ಮತ್ತು ಅದಾನಿ ನಡುವೆ ನಂಟು ಇದೆ ಎಂದು ಹೇಳುವ ಮೂಲಕ ರಾಹುಲ್ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. 2019ರಲ್ಲಿ ಅವರು ನೀಡಿದ್ದ ಮಾನಹಾನಿಕರ ಹೇಳಿಕೆಗೆ ಶಿಕ್ಷೆಯಾದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಅದಾನಿ ಕುರಿತು ರಾಹುಲ್ ಅವರು ಸಂಸತ್ತಿನಲ್ಲಿ ಮಾತನಾಡಿದ್ದಕ್ಕೆ ಸರ್ಕಾರ ಆತಂಕಗೊಂಡಿದೆ ಎಂಬುದನ್ನು ಅವರು ತಿರಸ್ಕರಿಸಿದ್ದಾರೆ. ರಾಹುಲ್ ಅವರ ಭಾಷಣವು ಆಧಾರರಹಿತವೂ ಅಸಂಬದ್ಧವೂ ಆಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಅನರ್ಹಗೊಳಿಸಿರುವುದು ರಾಜಕೀಯ ದ್ವೇಷದ ನಡೆ ಎಂಬುದನ್ನು ಅವರು ತಳ್ಳಿ ಹಾಕಿದ್ದಾರೆ. ಶಿಕ್ಷೆಗೆ ಒಳಗಾದ ಹಲವು ಮುಖಂಡರು ಈ ಹಿಂದೆಯೂ ಅನರ್ಹಗೊಂಡಿದ್ದಾರೆ. ಅವರಲ್ಲಿ ಬಿಜೆಪಿಯವರೂ ಇದ್ದಾರೆ ಎಂದು ರವಿಶಂಕರ್‌ ಹೇಳಿದ್ದಾರೆ.

‘ತಕ್ಷಣವೇ ಮೇಲ್ಮನವಿ ಸಲ್ಲಿಸದೇ ಇರುವುದಕ್ಕೆ ಕಾಂಗ್ರೆಸ್‌ನ ಒಳ ರಾಜಕೀಯವೂ ಕಾರಣ ಆಗಿರಬಹುದು. ರಾಹುಲ್‌ ತೊಲಗಲಿ ಎಂಬ ಇಚ್ಛೆ ಅಲ್ಲಿ ಹಲವರಿಗೆ ಇದೆ’ ಎಂದು ಅವರು ಹೇಳಿದ್ದಾರೆ.

***

ನನ್ನ ಮುಂದಿನ ಭಾಷಣದ ಕುರಿತು ಪ್ರಧಾನಿಗೆ ಭಯವಾಗಿದೆ. ಆ ಭಯವನ್ನು ಅವರ ಕಣ್ಣಿನಲ್ಲಿ ನಾನು ಕಂಡಿದ್ದೇನೆ. ನಾನು ಸಂಸತ್ತಿನಲ್ಲಿ ಆ ಭಾಷಣ ಮಾಡುವುದು ಅವರಿಗೆ ಬೇಕಿಲ್ಲ

– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ಗೆ ಟೀಕಿಸುವ ಹಕ್ಕಿದೆ, ಆದರೆ ನಿಂದಿಸುವಂತಿಲ್ಲ. ಅವರ ಹೇಳಿಕೆ ವಿಮರ್ಶಾತ್ಮಕವಾಗಿರಲಿಲ್ಲ, ನಿಂದನಾತ್ಮಕವಾಗಿತ್ತು

– ರವಿಶಂಕರ್ ಪ್ರಸಾದ್‌, ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.