ADVERTISEMENT

ರಾಷ್ಟ್ರಗೀತೆಗೆ ಅಗೌರವ: ಸಿಎಂ ಬ್ಯಾನರ್ಜಿಗೆ ಪರಿಹಾರ ನೀಡಲು ಕೋರ್ಟ್ ನಿರಾಕರಣೆ

ಪಿಟಿಐ
Published 29 ಮಾರ್ಚ್ 2023, 10:08 IST
Last Updated 29 ಮಾರ್ಚ್ 2023, 10:08 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಮುಂಬೈ: 2022ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿರುವ ದೂರಿನಲ್ಲಿ ಅವರಿಗೆ ಪರಿಹಾರ ನೀಡಲು ಬಾಂಬೆ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ವಿಚಾರಣೆಗಾಗಿ ಮತ್ತು ಸಮನ್ಸ್‌ ಜಾರಿ ವಿಚಾರದಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಮರು ಪರಿಶೀಲಿಸುವ ಸೆಷನ್ಸ್‌ ನ್ಯಾಯಾಲಯದ ಜನವರಿ 2023ರ ಆದೇಶವನ್ನು ಪ್ರಶ್ನಿಸಿ ಬ್ಯಾನರ್ಜಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಅಮಿತ್‌ ಬೋರ್ಕರ್‌ ನೇತೃತ್ವದ ಏಕ ಸದಸ್ಯ ಪೀಠವು ವಜಾಗೊಳಿಸಿತು.

ಸೆಷನ್ಸ್‌ ನ್ಯಾಯಾಲಯವು ಸಮನ್ಸ್‌ ಅನ್ನು ರದ್ದುಗೊಳಿಸುವ ಬದಲು ದೂರನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ನ್ಯಾಯಮೂರ್ತಿ ಬೋರ್ಕರ್‌, ಸೆಷನ್ಸ್‌ ನ್ಯಾಯಾಲಯದ ಆದೇಶದಲ್ಲಿ ಅಕ್ರಮವಿದೆ ಆದ್ದರಿಂದ ಹೈಕೋರ್ಟ್‌ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಮುಂಬೈನ ಕಫ್ ಪರೇಡ್‌ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದ ಸಾರ್ವಜನಿಕ ಸಮಾರಂಭದಲ್ಲಿ ಬ್ಯಾನರ್ಜಿ ಅವರು ಕುಳಿತ ಸ್ಥಾನದಲ್ಲಿ ರಾಷ್ಟ್ರಗೀತೆ ಹಾಡಲು ಪ್ರಾರಂಭಿಸಿದರು. ನಂತರ ನಿಂತುಕೊಂಡು ಸ್ಥಳದಿಂದ ಹೊರಡುವ ಮೊದಲು ಎರಡು ಪದ್ಯದ ಸಾಲುಗಳನ್ನು ಹಾಡಿದರು ಎಂದು ಆರೋಪಿಸಿ ಕಾರ್ಯಕರ್ತ ವಿವೇಕಾನಂದ ಗುಪ್ತಾ ಅವರು ಸಲ್ಲಿಸಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾರ್ಚ್ 2022ರಲ್ಲಿ ಬ್ಯಾನರ್ಜಿಗೆ ಸಮನ್ಸ್ ಜಾರಿ ಮಾಡಿತ್ತು.

ವಿಶೇಷ ನ್ಯಾಯಾಲಯದ ಮುಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮನ್ಸ್ ಅನ್ನು ಪ್ರಶ್ನಿಸಿದ್ದರು. ಜನವರಿ 2023 ರಲ್ಲಿ, ವಿಶೇಷ ನ್ಯಾಯಾಧೀಶ ಆರ್. ಎನ್. ರೋಕಡೆ ಅವರು ಕಾರ್ಯವಿಧಾನದ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ನೀಡಿದ ಸಮನ್ಸ್ ಅನ್ನು ರದ್ದುಗೊಳಿಸಿದ್ದರು ಮತ್ತು ದೂರನ್ನು ಹೊಸದಾಗಿ ಪರಿಗಣಿಸಲು ಮ್ಯಾಜಿಸ್ಟ್ರೇಟ್‌ಗೆ ತಿಳಿಸಿದ್ದರು.

ಹೈಕೋರ್ಟ್‌ನ ತಮ್ಮ ಅರ್ಜಿಯಲ್ಲಿ, ಬ್ಯಾನರ್ಜಿ ಅವರು ಈ ಆದೇಶವನ್ನು ಪ್ರಶ್ನಿಸಿ ಸಮನ್ಸ್ ಅನ್ನು ಹೊಸದಾಗಿ ಪರಿಗಣಿಸಲು ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶಿಸುವ ಬದಲು ಅದನ್ನು ರದ್ದುಗೊಳಿಸಬೇಕು ಎಂದು ಪ್ರತಿಪಾದಿಸಿದ್ದರು.

ಗುಪ್ತಾ ಅವರು ತಮ್ಮ ದೂರಿನಲ್ಲಿ ಬ್ಯಾನರ್ಜಿ ಅವರ ಕೃತ್ಯಗಳು ರಾಷ್ಟ್ರಗೀತೆಗೆ ಅವಮಾನ ಮತ್ತು ಅಗೌರವಕ್ಕೆ ಸಮಾನವಾಗಿದ್ದು, 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆಯಡಿ ಅಪರಾಧ ಎಂದು ಹೇಳಿದ್ದಾರೆ.

ಅವರು ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.