ಬೆಂಗಳೂರು: ದೇಶದಾದ್ಯಂತ ಜಾರಿಯಲ್ಲಿ ಇರುವ ದಿಗ್ಬಂಧನದ ಕಾರಣಕ್ಕೆ ಅವಶ್ಯಕ ಸರಕುಗಳ ಪೂರೈಕೆ ಸರಪಣಿಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವುದು ಉಲ್ಬಣಗೊಳ್ಳದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ತುರ್ತಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದು ಭಾರತದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಒಕ್ಕೂಟವು (ಎಫ್‌ಐಎಸ್‌ಎಂಇ) ಒತ್ತಾಯಿಸಿದೆ.
‘ದೇಶದಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗುಂಟ ಸಾವಿರಾರು ಟ್ರಕ್‌ಗಳು ಸಾಲುಸಾಲಾಗಿ ನಿಂತಿವೆ. ಜೀವನಾವಶ್ಯಕಅಗತ್ಯಸರಕುಗಳ ಪೈಕಿಜೀವರಕ್ಷಕ ಔಷಧಿ, ಮುಖಗವಸು, ವೈದ್ಯಕೀಯ ಸಲಕರಣೆ, ಸ್ಯಾನಿಟೈಸರ್‌ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕಾಗಿದೆ. ಪ್ರತಿಯೊಂದು ಸರಕಿನಪೂರೈಕೆಗೆನಿರ್ಬಂಧ ವಿಧಿಸಿರುವುದು ಸರಿಯಲ್ಲ’ ಎಂದು ‘ಎಫ್‌ಐಎಸ್‌ಎಂಇ’ ಪ್ರಧಾನ ಕಾರ್ಯದರ್ಶಿ ಅನಿಲ್ ಭಾರದ್ವಾಜ್ ಹೇಳಿದ್ದಾರೆ.
’ಸರಕುಗಳ ಪೂರೈಕೆ ಸರಣಿಗೆ ಸಂಬಂಧಿಸಿದಂತೆ ಹಲವಾರು ಗೋಜಲುಗಳನ್ನು ತುರ್ತಾಗಿ ಬಗೆಹರಿಸಬೇಕಾಗಿದೆ. ಸರ್ಕಾರ ವಿಧಿಸಿರುವ ನಿರ್ಬಂಧಗಳ ಹೊರತಾಗಿಯೂ ವಿವಿಧ ಸರಕುಗಳ ತಯಾರಿಕೆ, ಪೂರೈಕೆ ಮತ್ತು ವಿತರಣಾ ಚಟುವಟಿಕೆಗಳು ಸುಗಮವಾಗಿ ನಡೆಯಬೇಕಾಗಿದೆ. ಈ ಚಟುವಟಿಕೆಗಳಲ್ಲಿ ತೊಡಗಿರುವವರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆಯೂ ಮುಖ್ಯವಾಗಿರಬೇಕಾಗಿದೆ. ಏಳರಿಂದ ಹತ್ತು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯೋನ್ಮುಖವಾಗಬೇಕು. ಅವಶ್ಯಕ ಸರಕುಗಳ ಲಭ್ಯತೆಯಲ್ಲಿ ಅಭಾವ ಉಂಟಾಗದಂತೆ ಎಚ್ಚರವಹಿಸಬೇಕು. ಪರಿಹಾರ ಕಂಡುಕೊಳ್ಳಲು ವಿಳಂಬ ಮಾಡಿದರೆ ಅನಾಹುತ ಎದುರಾಗಲಿದೆ‘ ಎಂದು ಅವರು ’ಪ್ರಜಾವಾಣಿ‘ ಜತೆ ಮಾತನಾಡುತ್ತ ಆತಂಕ ವ್ಯಕ್ತಪಡಿಸಿದ್ದಾರೆ.
'ಈಗ ಉದ್ಭವಿಸಿರುವ ಬಿಕ್ಕಟ್ಟಿನ ಆರ್ಥಿಕ ನಷ್ಟವನ್ನು ಸದ್ಯಕ್ಕೆ ಅಂದಾಜು ಮಾಡಲು ಸಾಧ್ಯವಿಲ್ಲ. ಯಾವ ಸರಕುಗಳ ತಯಾರಿಕೆಗೆ ಅವಕಾಶ ನೀಡಬೇಕು, ಯಾವ ಉತ್ಪನ್ನಗಳ ತಯಾರಿಕೆ ಮತ್ತು ಪೂರೈಕೆ ಸ್ಥಗಿತಗೊಳಿಸಬೇಕು ಎನ್ನುವುದರ ಬಗ್ಗೆ ಗೊಂದಲ ಇದೆ. ಈ ಅನಿಶ್ಚಿತತೆ ತಪ್ಪಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರ ಈ ಸಂಬಂಧ ‘ಎಂಎಸ್‌ಎಂಇ’, ದೊಡ್ಡ ಉದ್ಯಮಗಳು ಮತ್ತು ಇ–ಕಾಮರ್ಸ್ ಕಂಪನಿಗಳ ಜತೆ ಮಾತುಕತೆ ನಡೆಸಬೇಕು.
‘ತುರ್ತಾಗಿ ಬೇಕಾದಅಗತ್ಯಸರಕುಗಳ ಪೂರೈಕೆ ಸುಸೂತ್ರವಾಗಿರುವಂತೆ ನೋಡಿಕೊಳ್ಳಲು ಶೇ 15 ರಿಂದ ಶೇ 20ರಷ್ಟು ತಯಾರಿಕೆ ಮತ್ತು ಪೂರೈಕೆ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಲು ಒಕ್ಕೂಟದ ಪರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಸರ್ಕಾರವು ಈಗಾಗಲೇ ಕೆಲ ಪರಿಹಾರ ಕೊಡುಗೆಗಳನ್ನು ಪ್ರಕಟಿಸಿದೆ. ಯಾರೊಬ್ಬರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಆದ್ಯತೆ ನೀಡಿರುವುದು ಸರಿಯಾದ ನಿರ್ಧಾರವಾಗಿದೆ‘ ಎಂದೂ ಅವರು ಹೇಳಿದ್ದಾರೆ.
ಒಕ್ಕೂಟದಲ್ಲಿ ‘ಎಂಎಸ್ಎಂ‘ ವಲಯದ 743 ಸಂಘ ಸಂಸ್ಥೆಗಳು ಸದಸ್ಯತ್ವ ಹೊಂದಿವೆ. ಈ ಸಂಘಗಳು 20 ಲಕ್ಷ ಸದಸ್ಯರನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.