ನವದೆಹಲಿ: ಪಂಜಾಬ್‌ನ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು ಹಾಗೂ ಸರ್ಕಾರದಲ್ಲಿ ಇತ್ತೀಚೆಗೆ ಮಾಡಲಾದ ಕೆಲವು ನೇಮಕಾತಿಗಳಿಂದ ಅಸಮಾಧಾನಗೊಂಡ ನವಜೋತ್ ಸಿಂಗ್ ಸಿಧು ಅವರು ರಾಜೀನಾಮೆಯಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ದಲಿತ ಸಮುದಾಯದ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿದ ದಿನವೇ ಸಿಧು ಅವರ ರಾಜಕೀಯ ಹಾದಿ ಅಂತ್ಯಗೊಂಡಿತ್ತು ಎಂದು ಕೆಲವು ಮುಖಂಡರು ಹೇಳುತ್ತಾರೆ. ಚುನಾವಣೆ ಬಳಿಕ ಸಿಧು ಅವರಿಗೆ ಅಧಿಕಾರ ಸಿಗುತ್ತದೆ ಎಂಬ ಖಾತ್ರಿ ಇಲ್ಲ ಎನ್ನುವ ನೋವು ಅವರಲ್ಲಿತ್ತು ಎನ್ನಲಾಗಿದೆ.
ಕೆಲವು ದಿನಗಳಿಂದ ಮುಖ್ಯಮಂತ್ರಿ ಚನ್ನಿ ಅವರ ಕಾರ್ಯ ಶೈಲಿ ದೃಢವಾಗಿದೆ.ತಾವು ತಾತ್ಕಾಲಿಕ ಮುಖ್ಯಮಂತ್ರಿ ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸುತ್ತಿದ್ದಾರೆ. ತಾವು ರಬ್ಬರ್ ಸ್ಟಾಂಪ್ ಅಲ್ಲ ಅಥವಾ ಸಿಧು ನೆರಳಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ತೋರಿಸಹೊರಟಂತೆ ಅವರ ವರ್ತನೆ ಕಂಡುಬರುತ್ತಿದೆ.
ಉಪಮುಖ್ಯಮಂತ್ರಿ ಸುಖ್‌ಜಿಂದರ್ ರಂಧಾವ ಅವರಿಗೆ ಗೃಹಖಾತೆ ನೀಡಿದ್ದು ಸಿಧು ಅವರಿಗೆ ಸಿಟ್ಟು ತರಿಸಿರುವ ಅಂಶ ಎಂದು ಪರಿಗಣಿಸಲಾಗಿದೆ. ರಂಧಾವ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಿದ್ದಾಗ ಸಿಧು ತೀವ್ರವಾಗಿ ವಿರೋಧಿಸಿದ್ದರು. ರಂಧಾವ ಮತ್ತು ಸಿಧು ಇಬ್ಬರು ಜಾಟ್ ಸಿಖ್ ಸಮುದಾಯಕ್ಕೆ ಸೇರಿದವರು.
ತಮ್ಮ ಆಕ್ಷೇಪಣೆಯ ಹೊರತಾಗಿಯೂ ರಾಣಾ ಗುರ್ಜಿತ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂಬುದು ಸಿಧು ಅವರಲ್ಲಿ ಆಕ್ರೋಶ ತರಿಸಿದೆ.
‘ನವಜೋತ್ ಸಿಂಗ್ ಸಿಧು ಅವರು ದಲಿತರ ವಿರೋಧಿ ಎಂಬುದನ್ನು ಇದು ತೋರಿಸುತ್ತಿದೆ. ಬಡತನದ ಹಿನ್ನೆಲೆಯಿಂದ ಬಂದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿದ್ದನ್ನು ಸಿಧು ಸಹಿಸುತ್ತಿಲ್ಲ. ಇದು ದುಃಖಕರ’ ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ಪ್ರತಿಕ್ರಿಯಿಸಿದ್ದಾರೆ.
ಕೇವಲ ಅರಾಜಕತೆ ತುಂಬಿರುವ ಪಂಜಾಬ್ ಕಾಂಗ್ರೆಸ್‌ನಿಂದ ರಾಜ್ಯದ ಜನರು ಸುಭದ್ರ, ಅಭಿವೃದ್ಧಿಪರ ಆಡಳಿತ ನಿರೀಕ್ಷಿಸಲು ಸಾಧ್ಯವೇ ಎಂದು ಎಎಪಿ ಮುಖಂಡ ರಾಘವ್ ಚಡ್ಡಾ ಟ್ವೀಟ್ ಮಾಡಿದ್ದಾರೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.