ADVERTISEMENT

ಈಶಾನ್ಯದಲ್ಲಿ ಆಫ್‌ಸ್ಪ ಅಡಿಯಲ್ಲಿರುವ 'ಪ್ರಕ್ಷುಬ್ಧ' ಪ್ರದೇಶಗಳು ಕಡಿತ: ಅಮಿತ್‌ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2022, 10:21 IST
Last Updated 31 ಮಾರ್ಚ್ 2022, 10:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಗೆ (ಆಫ್‌ಸ್ಪ) ಒಳಪಡುವ ಪ್ರದೇಶವನ್ನು ಕೇಂದ್ರ ಸರ್ಕಾರವು ಗುರುವಾರ ಕಡಿಮೆ ಮಾಡಿದೆ. ನಾಗಾಲ್ಯಾಂಡ್‌, ಅಸ್ಸಾಂ ಹಾಗೂ ಮಣಿಪುರದಲ್ಲಿ ಹಲವು ವರ್ಷಗಳ ಬಳಿಕ ಆಫ್‌ಸ್ಪ ನಿಯಂತ್ರಿತ ಪ್ರದೇಶವು ಕಡಿತಗೊಂಡಿರುವ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಟ್ವೀಟಿಸಿದ್ದಾರೆ.

'ಉತ್ತಮಗೊಂಡಿರುವ ಭದ್ರತಾ ಪರಿಸ್ಥಿತಿ, ಸತತ ಪ್ರಯತ್ನಗಳ ಫಲವಾಗಿ ವೇಗ ಪಡೆದಿರುವ ಅಭಿವೃದ್ಧಿ ಕಾರ್ಯಗಳು, ಬಂಡಾಯ ಶಮನಗೊಳಿಸಲು ನಡೆಸಿರುವ ಹಲವು ಒಪ್ಪಂಗಳು ಹಾಗೂ ಈಶಾನ್ಯ ಭಾಗದಲ್ಲಿ ಮರೆಯಾಗಿರುವ ಶಾಂತಿಯನ್ನು ಮರಳಿ ತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾಡಿರುವ ಪ್ರಯತ್ನಗಳ ಫಲವಾಗಿ ಆಫ್‌ಸ್ಪಗೆ ಒಳಪಟ್ಟಿರುವ ವಲಯ ಕಡಿತಗೊಂಡಿದೆ' ಎಂದು ಅಮಿತ್‌ ಶಾ ಪ್ರಕಟಿಸಿದ್ದಾರೆ.

ಆಂಗ್ಲರ ವಿರುದ್ಧ ದೇಶದಲ್ಲಿ ನಡೆಯುತ್ತಿದ್ದ ಕ್ವಿಟ್‌ ಇಂಡಿಯಾ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷ್‌ ಆಡಳಿತವು 1942ರಲ್ಲಿ ಆಫ್‌ಸ್ಪ ಜಾರಿಗೊಳಿಸಿತು. ಭಾರತ ಸ್ವಾತಂತ್ರ್ಯ ಪಡೆದ ನಂತರವೂ ಆಫ್‌ಸ್ಪ ಉಳಿಸಿಕೊಳ್ಳಲಾಯಿತು ಹಾಗೂ 1958ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು. ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿಯಂತ್ರಿಸಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳಲು 'ಆಫ್‌ಸ್ಪ' ಅಡಿಯಲ್ಲಿ ಅವಕಾಶ ಸಿಗುತ್ತದೆ.

ADVERTISEMENT

ಪಡೆಗಳ ಗುಂಡಿಗೆ ಹಲವು ಮುಗ್ಧ ನಾಗರಿಕರು ಬಲಿಯಾಗಿದ್ದು, ಸೇನೆಗೆ ವಿಶೇಷಾಧಿಕಾರವನ್ನು ನೀಡುವ 'ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958' ಅನ್ನು ರದ್ದುಪಡಿಸಬೇಕು ಎಂದು ಈ ಹಿಂದೆ ಹಲವು ಬಾರಿ ಜನರು ರಸ್ತೆಗಳಿದು ಹೋರಾಟ ನಡೆಸಿದ್ದಾರೆ.

ಆಫ್‌ಸ್ಪ: ಸೇನೆಯ ಕಾರ್ಯಾಚರಣೆಗೆ ಕಾನೂನು ಕ್ರಮವಿಲ್ಲ...

ಈ ಕಾಯ್ದೆಯ ಸೆಕ್ಷನ್‌ 4ರ ಅಡಿ 'ಪ್ರಕ್ಷುಬ್ಧ ಪ್ರದೇಶ' ಎಂದು ಘೋಷಿಸಲಾದ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಅಗತ್ಯ ಎನಿಸಿದರೆ ಸೇನಾಧಿಕಾರಿ ಅಥವಾ ಸೈನಿಕರು ಎಚ್ಚರಿಕೆ ನೀಡಿ, ನಂತರ ಗುಂಡು ಹಾರಿಸಬಹುದು. ಶಂಕಿತ ವ್ಯಕ್ತಿಯನ್ನು ವಾರಂಟ್‌ ಇಲ್ಲದೆ ಬಂಧಿಸಬಹುದು ಹಾಗೂ ಬಂಧನದ ವೇಳೆ ಅಗತ್ಯವಿದ್ದರೆ ಬಲ ಪ್ರಯೋಗಿಸಬಹುದು.

ಕಾಯ್ದೆಯ ಸೆಕ್ಷನ್‌ 6ರ ಅಡಿ ಘೋಷಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಾಗ ಸೇನೆಯ ಯಾವುದೇ ರ‍್ಯಾಂಕ್‌ನ ಅಧಿಕಾರಿಗಳು ನಡೆಸುವ, ಯಾವುದೇ ಕೃತ್ಯದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದನ್ನು ಈ ಕಾಯ್ದೆಯು ನಿರ್ಬಂಧಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.