ಗುರುಗ್ರಾಮ್: ಮುಂಬೈನಲ್ಲಿ ಪೊಲೀಸ್ ನಕಲಿ ಎನ್‌ಕೌಂಟರ್ ಎಂದು ಆರೋಪಿಸಲಾಗಿದ್ದ ಗ್ಯಾಂಗ್‌ಸ್ಟರ್ ಕೊಲೆ ಪ್ರಕರಣದಲ್ಲಿ ಮೋಹಕ ಬಲೆಯಾಗಿ ನೆರವಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರನ್ನು ಮಂಗಳವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಗ್ಯಾಂಗ್‌ಸ್ಟರ್ ಕೊಲೆ ಆರೋಪಿಯಾಗಿದ್ದ ದಿವ್ಯಾ ಅವರಿಗೆ ಜೂನ್‌ನಲ್ಲಿ ಜಾಮೀನು ಮಂಜೂರಾಗಿತ್ತು. ಐದು ಜನರಿದ್ದ ಗುಂಪೊಂದು ಮಂಗಳವಾರ ರಾತ್ರಿ ದಿವ್ಯಾ ಅವರನ್ನು ಹೋಟೆಲ್ ಒಂದಕ್ಕೆ ಕರೆದೊಯ್ದು ತಲೆಗೆ ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ನಂತರ ಮೃತ ದೇಹವನ್ನು ಕಾರಿನಲ್ಲಿರಿಸಿ ನಾಶಪಡಿಸುವ ಪ್ರಯತ್ನದಲ್ಲಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಎಂಬಾತನನ್ನು 2016ರ ಫೆ. 7ರಂದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಡಿ ರೂಪದರ್ಶಿ ದಿವ್ಯಾ ಅವರನ್ನು ಪೊಲೀಸರು ಬಂಧಿಸಿದ್ದರು. ಕಳೆದ ಜೂನ್‌ನಲ್ಲಿ ಇವರಿಗೆ ಬಾಂಬೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ದಿವ್ಯಾ ಅವರೊಂದಿಗೆ ಅವರ ತಾಯಿ, ಐದು ಜನ ಪೊಲೀಸರೂ ಬಂಧನಕ್ಕೊಳಗಾಗಿದ್ದರು.
ಕೊಲೆಯಾದ ಗಡೋಲಿಯನ್ನು ತನ್ನ ಮೋಹದ ಬಲೆಗೆ ಬೀಳಿಸಿಕೊಂಡಿದ್ದ ದಿವ್ಯಾ ಪಹುಜಾ ನಕಲಿ ಎನ್‌ಕೌಂಟರ್‌ಗೆ ಸಹಕರಿಸಿದ್ದರು ಎಂದು ಮುಂಬೈ ಪೊಲೀಸರು ತಮ್ಮ ವರದಿಯಲ್ಲಿ ಹೇಳಿದ್ದಾರೆ.
ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಎಂಬಾತ ಗಡೋಲಿ ವಿರೋಧಿಯಾಗಿ ಗ್ಯಾಂಗ್ ನಡೆಸುತ್ತಿದ್ದ. ಹರಿಯಾಣದ ಪೊಲೀಸರೊಂದಿಗೆ ಶಾಮೀಲಾಗಿದ್ದ ಈತ ಗಡೋಲಿಯನ್ನು ಸಾಯಿಸಲು ಸಂಚು ರೂಪಿಸಿದ್ದ. ಎನ್‌ಕೌಂಟರ್ ನಡೆದಾಗ ಗುಜ್ಜರ್ ಜೈಲಿನಲ್ಲಿದ್ದ. ತನ್ನ ಸೋದರ ಮನೋಜ್‌ನ ನೆರವು ಪಡೆದ ಈತ, ದಿವ್ಯಾಳನ್ನು ಹನಿ ಟ್ರ್ಯಾಪ್ ಆಗಿ ಬಳಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.