ಜೈಪುರ: ದೀಪಾವಳಿ ಅಂಗವಾಗಿ ಸದ್ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಬಿಕಾನೆರ್‌ನ ಮುಸ್ಲಿಂ ಕವಿಗಳು ರಾಮಾಯಣದ ಉರ್ದು ಆವೃತ್ತಿಯನ್ನು ವಾಚಿಸಿದ್ದಾರೆ.
ಭಾನುವಾರ ನಡೆದ ಸಮಾರಂಭದಲ್ಲಿ ಉರ್ದು ಕವಿ ಹಾಗೂ ಶಿಕ್ಷಕರೂ ಆಗಿರುವ ಜಿಯಾ ಉಲ್ ಹಸನ್ ಖಾದ್ರಿ ಅವರು ಇತರ ಇಬ್ಬರು ಮುಸ್ಲಿಂ ಕವಿಗಳ ಜತೆ ಉರ್ದು ರಾಮಾಯಣ ಪಠಿಸಿದರು. ‘ಸಾಮರಸ್ಯ ಮತ್ತು ಸಹೋದರತ್ವದ ಸಂದೇಶ ರವಾನಿಸುವುದು ಈ ಕಾರ್ಯಕ್ರಮದ ಉದ್ದೇಶ’ ಎಂದು ಖಾದ್ರಿ ಹೇಳಿದ್ದಾರೆ.
‘ಪರ್ಯಟನ್ ಲೇಖಕ್ ಸಂಘ’ ಮತ್ತು ‘ಮೆಹಫಿಲ್ ಎ ಆದಾಬ್’ ಸಂಸ್ಥೆಗಳು ಬೀಕಾನೆರ್‌ನಲ್ಲಿ 2012ರಿಂದ ಪ್ರತಿ ವರ್ಷವೂ ‘ಉರ್ದು ರಾಮಾಯಣ ವಚನ’ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ.
ಭಗವಾನ್ ರಾಮನ ವನವಾಸ, ರಾವಣನ ವಿರುದ್ಧದ ಗೆಲುವು ಮತ್ತು ಅಯೋಧ್ಯೆಗೆ ಹಿಂದಿರುಗುವುದು ಸೇರಿದಂತೆ ರಾಮಾಯಣದಲ್ಲಿ ಬರುವ ಪ್ರಸಂಗಗಳನ್ನು ಉರ್ದುವಿನಲ್ಲಿ ವಾಚಿಸಲಾಗಿದೆ ಎಂದು ಖಾದ್ರಿ ತಿಳಿಸಿದ್ದಾರೆ.
ಬಿಕಾನೆರ್‌ನ ಮೌಲವಿ ಬಾದ್‌ಶಾ ಹುಸೇನ್ ರಾಣಾ ಲಖ್ನವಿ ಎಂಬವರು 1935ರಲ್ಲಿ ರಾಮಾಯಣದ ಉರ್ದು ಆವೃತ್ತಿಯನ್ನು ರಚಿಸಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯವು ತುಳಸೀದಾಸ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡು ಅವರು ಇದನ್ನು ರಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.