ಜೈಪುರ: ದೀಪಾವಳಿ ಪ್ರಯುಕ್ತ ಹಸುವಿನ ಸಗಣಿ ಬಳಸಿ ಸುಮಾರು 3 ಲಕ್ಷಕ್ಕೂ ಹೆಚ್ಚಿನ ದೀಪಗಳನ್ನು ‘ಶ್ರೀ ಕೃಷ್ಣ ಬಲರಾಮ ಗೋ ಸೇವಾ ಟ್ರಸ್ಟ್’ ತಯಾರಿಸಿದೆ ಎಂದು ಸಂಸ್ಥೆಯ ವಕ್ತಾರೊಬ್ಬರು ತಿಳಿಸಿದ್ದಾರೆ.
ದೀಪಗಳನ್ನು ತಯಾರಿಸಲು ಬೇಕಾದ ಸಗಣಿಯನ್ನು ಹಿಂಗೋನಿಯಾ ಗೋಶಾಲೆಯಿಂದ ತರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
2016 ರಲ್ಲಿ ರಾಜಸ್ಥಾನ ಸರ್ಕಾರ ಮತ್ತು ಜೈಪುರ ಮಹಾನಗರ ಪಾಲಿಕೆಯು ಜಂಟಿಯಾಗಿ ಈ ಗೋಶಾಲೆಯನ್ನು ಸ್ಥಾಪಿಸಿದೆ. ಈ ಗೋಶಾಲೆಯು ಸುಮಾರು 13,000ಕ್ಕೂ ಹೆಚ್ಚು ಹಸುಗಳನ್ನು ಹೊಂದಿದೆ.
‘ನಾವು ಸುಮಾರು 3 ಲಕ್ಷಕ್ಕೂ ಹೆಚ್ಚಿನ ದೀಪಗಳನ್ನು ಹಸುವಿನ ಸಗಣಿಯಿಂದ ತಯಾರಿಸಿದ್ದೇವೆ, ಇದಕ್ಕಾಗಿ, ನಮ್ಮ ಸ್ವಯಂ ಸೇವಕರು ಹಲವು ದಿನಗಳು ಕೆಲಸ ಮಾಡಿದ್ದಾರೆ. ಇದರ ಉದ್ದೇಶವು ಗೋವುಗಳ ರಕ್ಷಣೆಯ ಸಂದೇಶವನ್ನು ನೀಡುವುದಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.
ದೀಪಗಳನ್ನು ತಯಾರಿಸಲು ಹಿಟ್ಟು, ಮರದ ಪುಡಿ ಮತ್ತು ಗಮ್ ಗೌರ್ ಪುಡಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೇರೆಸಲಾಗುತ್ತದೆ. ಈ ಮಿಶ್ರಣವು ದೀಪಗಳಿಗೆ ಅಂದವಾದ ಆಕಾರವನ್ನು ನೀಡುತ್ತದೆ. ಹೈಡ್ರಾಲಿಕ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುವ ಯಂತ್ರದ ಸಹಾಯದಿಂದ ಈ ದೀಪಗಳನ್ನು ತಯಾರಿಸಲಾಗುತ್ತದೆ. ಒಂದು ಬಾರಿಗೆ ಸುಮಾರು 11 ದೀಪಗಳನ್ನು ತಯಾರಿಸಬಹುದಾಗಿದೆ. ಅಲ್ಲದೆ, ಈ ದೀಪಗಳನ್ನು ಸಸ್ಯಗಳಿಗೆ ಗೊಬ್ಬರವಾಗಿ ಕೂಡ ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.