ನವದೆಹಲಿ: ದೆಹಲಿ ಮೆಟ್ರೊ ರೈಲಿನಲ್ಲಿ ಧ್ವನಿ ಆಧಾರಿತ ಜಾಹೀರಾತು ಪ್ರಸಾರ ಮಾಡಲು ದೆಹಲಿ ಮೆಟ್ರೊ ರೈಲು ಕಾರ್ಪೊರೇಷನ್ ನಿರ್ಧರಿಸಿದ್ದು, ಪ್ರಾಯೋಗಿಕವಾಗಿ ನೇರಳೆ ಬಣ್ಣದ ಆರು ರೈಲುಗಳಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಶ್ಮೀರ್ ಗೇಟ್ ಹಾಗೂ ಬಾದರ್‌ಪುರ್ ಬಾರ್ಡರ್ ನಿಲ್ದಾಣ ನಡುವಿನ ಮಾರ್ಗದಲ್ಲಿ ಮುಂದಿನ ಒಂದು ವರ್ಷಗಳ ಅವಧಿಗೆ ಈ ಜಾಹೀರಾತು ಪ್ರಸಾರವಾಗಲಿದೆ. ಅಗತ್ಯ ಸೇವೆಗಳ ಘೋಷಣೆಗಳನ್ನು ಒಳಗೊಂಡಂತೆ ಈ ಜಾಹೀರಾತು ಪ್ರಸಾರವಾಗಲಿದೆ. ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಅದನ್ನು ಅತ್ಯಂತ ಜಾಗರೂಕತೆಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಇದೊಂದು ಪ್ರಾಯೋಗಿಕ ಯೋಜನೆಯಾಗಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಈ ಆದಾಯ ಮೂಲವನ್ನು ಇತರ ಮಾರ್ಗಗಳಿಗೂ ವಿಸ್ತರಿಸಲಾಗುವುದು. ಧ್ವನಿ ಆಧಾರಿತ ಜಾಹೀರಾತುಗಳು ಮೆಟ್ರೊ ಮೂಲಕ ಸಂಚರಿಸುವ ಲಕ್ಷಾಂತರ ಜನರನ್ನು ಬೇಗ ತಲುಪುತ್ತವೆ. ಇದರಿಂದ ಮೆಟ್ರೊ ಆದಾಯವೂ ಹೆಚ್ಚಲಿದೆ. ಮುಂಬೈ ಮೆಟ್ರೊದಲ್ಲಿ ಈಗಾಗಲೇ ಈ ಸೌಲಭ್ಯ ಲಭ್ಯವಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.