ನವದೆಹಲಿ: ಎಐಎಡಿಎಂಕೆ ನೇತೃತ್ವದ ಮೈತ್ರಿಯಿಂದ ಡಿಎಂಡಿಕೆ ಹೊರನಡೆದಿರುವುದರಿಂದ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ತಮಿಳುನಾಡು ಅಧ್ಯಕ್ಷ ಎಲ್ ಮುರುಗನ್ ಹೇಳಿದ್ದಾರೆ.
ಶನಿವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯೊಂದಿಗಿನ (ಸಿಇಸಿ) ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ನಾವು ನಮ್ಮ ಹಿತಾಸಕ್ತಿಗಳನ್ನು ಸಿಇಸಿಗೆ ತಿಳಿಸಿದ್ದೇವೆ. ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು' ಎಂದು ಹೇಳಿದರು.
ಮೈತ್ರಿಕೂಟದಿಂದ ಡಿಎಂಡಿಕೆ ನಿರ್ಗಮಿಸಿದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಅವರು, 'ಎಐಎಡಿಎಂಕೆಯು ಮೈತ್ರಿಕೂಟದ ನಾಯಕ. ನಾವು ಮೈತ್ರಿಕೂಟದಲ್ಲಿ ಕಿರಿಯ ಪಾಲುದಾರರಾಗಿದ್ದೇವೆ, ಮೈತ್ರಿಕೂಟಕ್ಕೆ ವಿದಾಯ ಹೇಳುವ ಪಕ್ಷಗಳು ಎಐಎಡಿಎಂಕೆ ಜೊತೆ ಚರ್ಚೆ ನಡೆಸಿದ್ದವು. ಆ ಚರ್ಚೆಗಳ ಬಗ್ಗೆ ನಮಗೆ ತಿಳಿದಿಲ್ಲ' ಎಂದಿದ್ದಾರೆ.
'ಎಐಎಡಿಎಂಕೆ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಮೈತ್ರಿಕೂಟದ ಪಾಲುದಾರರು ಮೈತ್ರಿಯಿಂದ ನಿರ್ಗಮಿಸುವುದರಿಂದಾಗಿ ನಮ್ಮ ಗೆಲುವಿನ ಅವಕಾಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾವು ಗೆದ್ದು ಸರ್ಕಾರ ರಚಿಸುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯ ಮತ್ತು ಮಹಿಳೆಯರ ಸಮರ್ಪಕ ಪ್ರಾತಿನಿಧ್ಯ ಇರುತ್ತದೆ ಎಂದರು.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಆಯಾ ರಾಜ್ಯಗಳ ಉನ್ನತ ನಾಯಕರೊಂದಿಗೆ ಸಭೆ ನಡೆಸಿದರು.
234 ಸದಸ್ಯರ ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.
2016ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯು 134 ಸ್ಥಾನಗಳಲ್ಲಿ ಗೆದ್ದಿದ್ದರೆ, 80 ಸ್ಥಾನಗಳಲ್ಲಿ ಡಿಎಂಕೆ ಮತ್ತು 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬಿಜೆಪಿ ಯಾವುದೇ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.