ಚೆನ್ನೈ: ಹಿಂದಿಭಾಷೆ ಅರ್ಥವಾಗದವರುವರ್ಚುಯಲ್ ಸಭೆಯಿಂದ ಹೊರನಡೆಯಬೇಕು, ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹಿಂದಿಯೇತರ ಭಾಷಿಕರಿಗೆಆಯುಷ್ ಇಲಾಖೆಯು ಎಚ್ಚರಿಸಿದೆ ಎಂದು ಡಿಎಂಕೆ ಆರೋಪಿಸಿದೆ. ಇದರೊಂದಿಗೆ ಹಿಂದಿ ವಿರೋಧಿ ಹೋರಾಟಕ್ಕೆ ಇನ್ನೊಂದು ವಿವಾದ ಸೇರಿಕೊಂಡಿದೆ.
ರಾಜ್ಯದ ಯೋಗ ಮತ್ತು ನ್ಯಾಚುರೋಪಥಿ ವೈದ್ಯರಿಗೆ ಇಂಥ ಸೂಚನೆ ನೀಡಲಾಗಿದೆ. ಇದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಅಧಿಕಾರಿಗಳ ಮೂಲಕ ಹಿಂದಿ ಭಾಷೆ ಹೇರುತ್ತಿರುವ ತಂತ್ರವನ್ನು ಬಹಿರಂಗಪಡಿಸಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಆರೋಪಿಸಿದರು.
ಡಿಎಂಕೆ ಸಂಸದೆ ಕನಿಮೋಳಿ ಅವರು, ಆಯುಷ್ ಸಚಿವ ಶ್ರೀಪಾದ ಯೆಸ್ಸೊ ನಾಯಕ್ ಅವರಿಗೆ ಪತ್ರವನ್ನು ಬರೆದಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದಿ ಭಾಷೆ ಮಾತನಾಡದಿದ್ದಕ್ಕೇ ನೀವು ಭಾರತೀಯರೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ತಮ್ಮನ್ನು ಪ್ರಶ್ನಿಸಿದ್ದರು ಎಂದು ಈಚೆಗೆ ಕನಿಮೋಳಿ ಆರೋಪಿಸಿದ್ದರು. ಅದರ ಹಿಂದೆಯೇ ಹಿಂದಿ ಭಾಷೆ ಹೇರಿಕೆ ಕುರಿಂತೆ ಡಿಎಂಕೆ ಮತ್ತೆ ತನ್ನ ಆಕ್ಷೇಪವನ್ನು ಹೊರಹಾಕಿದೆ.
ಈ ಕುರಿತ ಹೇಳಿಕೆಯಲ್ಲಿ ಸ್ಟಾಲಿನ್ ಅವರು, ಆಯುಷ್ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚ ಅವರು, ಹಿಂದಿ ಭಾಷೆ ಅರ್ಥವಾಗದಿದ್ದರೆ ಸಭೆಯಿಂದ ಹೊರನಡೆಯಬೇಕು ಎಂದು 37 ಮಂದಿ ಹಿಂದಿಯೇತರ ಭಾಷಿಕರಿಗೆ ಸೂಚಿಸಿದ್ದಾರೆ. ಕಾರ್ಯದರ್ಶಿ ಹಂತದ ಅಧಿಕಾರಿಯೇ ಹೀಗೆ ಅನಾಗರಿಕವಾಗಿ ವರ್ತಿಸುವುದನ್ನು ಖಂಡಿಸುತ್ತೇವೆ ಎಂದಿದ್ದಾರೆ.
ಇಂಥ ಘಟನೆಗಳು ಮರುಕಳಿಸದಂತೆ ಪ್ರಧಾನಿ ಮೋದಿ ಎಚ್ಚರಿಕೆ ವಹಿಸಬೇಕು ಅಲ್ಲದೆ, ಕೇಂದ್ರ ಸರ್ಕಾರ ಆಯೋಜಿಸುವ ತರಬೇತಿ ಕಾರ್ಯಕ್ರಮಗಳು ಇಂಗ್ಲಿಷ್ ಭಾಷೆಯಲ್ಲಿಯೇ ಇರಬೇಕು ಎಂದು ಒತ್ತಾಯಿಸಿ ಪತ್ರಬರೆಯಬೇಕು ಎಂದುಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಗೂ ಸ್ಟಾಲಿನ್ ಆಗ್ರಹಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.