ಚೆನ್ನೈ: ನಾಲ್ಕು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ನಾಯಕ ಕರುಣಾನಿಧಿ ಅವರ ಸ್ಥಾನವನ್ನು ತುಂಬುವುದೇ ಈಗ ಡಿಎಂಕೆ ಮುಖಂಡರ ಮುಂದಿರುವ ದೊಡ್ಡ ಸವಾಲು.
1969ರಲ್ಲಿ ಪಕ್ಷದ ಸಾರಥ್ಯ ವಹಿಸಿಕೊಂಡ ಕರುಣಾನಿಧಿ ಅವರು, ಐದು ದಶಕಗಳ ಕಾಲ ಚುಕ್ಕಾಣಿ ಹಿಡಿದು, ಪಕ್ಷವನ್ನು ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನಾಯಕತ್ವಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗುವ ನಿರ್ವಾತವನ್ನು ಅವರ ಪುತ್ರ ಎಂ.ಕೆ.ಸ್ಟಾಲಿನ್ ತುಂಬಬೇಕಿದೆ. ಪತ್ನಿ ದಯಾಳು ಅಮ್ಮಾಳ್ ಉದರದಲ್ಲಿ ಜನಿಸಿರುವ ಎರಡನೇ ಪುತ್ರ ಸ್ಟಾಲಿನ್ ಅವರ ಮೇಲೆ ಕರುಣಾನಿಧಿಗೆ ತುಸು ಹೆಚ್ಚಿನ ಮಮತೆ. ಇದೇ ಕಾರಣಕ್ಕೆ, ಸ್ಟಾಲಿನ್ ಅವರಿಗೆ ರಾಜಕೀಯ ಪಟ್ಟುಗಳನ್ನು ಕಲಿಸಿಕೊಟ್ಟಿರುವ ಕರುಣಾನಿಧಿ, ಕುಟುಂಬದ ಒಳಗೇ ವ್ಯಕ್ತವಾಗಿದ್ದ ವಿರೋಧವನ್ನೂ ಮೆಟ್ಟಿ ನಿಲ್ಲುವಲ್ಲಿ ಸ್ಟಾಲಿನ್‌ಗೆ ನೆರವು ನೀಡಿದರು.
ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿರುವ ಸ್ಟಾಲಿನ್, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದವರು. ಇದೇ ಸಂದರ್ಭದಲ್ಲಿಯೇ ಅವರು ತಂದೆಯಿಂದ ರಾಜಕಾರಣದ ಪಾಠ ಹೇಳಿಸಿಕೊಂಡು, ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ವಿವರಿಸುತ್ತಾರೆ.
ಎಐಎಡಿಎಂಕೆಯ ಬಂಡಾಯ ನಾಯಕ ಟಿ.ಟಿ.ವಿ.ದಿನಕರನ್ ಅವರ ಜನಪ್ರಿಯತೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮೇರು ನಟರಾದ ರಜಿನಿಕಾಂತ್ ಹಾಗೂ ಕಮಲ್‌ಹಾಸನ್ ಸಹ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ಸಹ ಸ್ಟಾಲಿನ್ ಮುಂದಿರುವ ಮತ್ತೊಂದು ಸವಾಲು ಎಂದೂ ಹೇಳುತ್ತಾರೆ.
ಕರುಣಾನಿಧಿ ಅಂತ್ಯಸಂಸ್ಕಾರ ಸ್ಥಳ ವಿವಾದ
ಚೆನ್ನೈ (ಪಿಟಿಐ): ಕರುಣಾನಿಧಿಯವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಉದ್ಭವಿಸಿದೆ. ಸಮಾಧಿಗಾಗಿ ಮರೀನಾ ಬೀಚ್‌ನಲ್ಲಿ ಸ್ಥಳ ನೀಡುವಂತೆ ವಿರೋಧಪಕ್ಷ ಡಿಎಂಕೆ ಇಟ್ಟ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.
ಆದರೆ, ಮಾಜಿ ಮುಖ್ಯಮಂತ್ರಿಗಳಾದ ಸಿ.ರಾಜಗೋಪಾಲಚಾರಿ ಮತ್ತು ಕೆ. ಕಾಮರಾಜ ಅವರ ಸಮಾಧಿ ಇರುವ ಸರ್ದಾರ್ ಪಟೇಲ್ ರಸ್ತೆಯ ಬಳಿ ಅವಕಾಶ ನೀಡುವುದಾಗಿ ಹೇಳಿರುವ ಸರ್ಕಾರ, ಎರಡು ಎಕರೆ ಜಾಗವನ್ನೂ ಮಂಜೂರು ಮಾಡಿದೆ.
ಸಿ.ಎನ್. ಅಣ್ಣಾದೊರೈ ಅವರ ಸ್ಮಾರಕವಿರುವ ಮರೀನಾ ಬೀಚ್ ಬಳಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಮಾಡಿದ ಮನವಿಯನ್ನು ರಾಜ್ಯಸರ್ಕಾರ ತಿರಸ್ಕರಿಸಿದೆ. ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿಯಾಗಿದ್ದ ಸ್ಟಾಲಿನ್ ಈ ಕುರಿತು ಚರ್ಚಿಸಿದ್ದರು.
‘ಮರೀನಾ ಬೀಚ್ ಬಳಿ ಜಾಗ ನೀಡುವುದಕ್ಕೆ ಕಾನೂನು ತೊಡಕಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಮದ್ರಾಸ್ ಹೈಕೋರ್ಟ್‌ನಲ್ಲಿ ಬಾಕಿ ಇವೆ’ ಎಂದು ಸರ್ಕಾರ ಹೇಳಿದೆ.
ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರುಣಾನಿಧಿಯವರು ಅಧಿಕಾರದಲ್ಲಿಲ್ಲದಿರುವುದು ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಮರೀನಾ ಬೀಚ್‌ನಲ್ಲಿ ಸಮಾಧಿ ಮಾಡಲಾಗಿರುವ ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ವೇಳೆಯೇ ನಿಧನರಾಗಿದ್ದರು.
ಇದನ್ನೂ ಓದಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.