ನವದೆಹಲಿ: ‘ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಡಳಿತದಲ್ಲಿನ ಅವ್ಯವಹಾರಗಳನ್ನು ಮುಚ್ಚಿಡುವ ಉದ್ದೇಶದಿಂದ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್‌ನ ಸಮ್ಮತಿಯಂತೆ ಡಿಎಂಕೆ ಮುಖಂಡರು ಸನಾತನ ಧರ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.
ತಮಿಳುನಾಡು ಬಿಜೆಪಿ ಸಹ ಉಸ್ತುವಾರಿ ಪೊಂಗುಲೇಟಿ ಸುಧಾಕರ ರೆಡ್ಡಿ ಅವರು ಡಿಎಂಕೆ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಪ್ರಭಾವಿತರಾಗಿ ತಮಿಳುನಾಡಿನಲ್ಲಿ ಬಿಜೆಪಿ ಪಡೆಯುತ್ತಿರುವ ಅದ್ಭುತ ಪ್ರತಿಕ್ರಿಯೆಯನ್ನು ಸಹಿಸದ ಡಿಎಂಕೆ ಹಾಗೂ ಕಾಂಗ್ರೆಸ್ ಕಟ್ಟುಕತೆ ಸೃಷ್ಟಿಸುತ್ತಿವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ತಮಿಳುನಾಡು ಉಪಾಧ್ಯಕ್ಷ ನಾರಾಯಣ ತಿರುಪತಿ ಮಾತನಾಡಿ, ‘ರಾಜ್ಯ ಸರ್ಕಾರದ ಖಾತೆ ಇಲ್ಲದ ಒಬ್ಬರು ಸಚಿವರು ಜೈಲಿನಲ್ಲಿದ್ದು, ಇದು ಡಿಎಂಕೆಗೆ ಹಿನ್ನಡೆಯಾಗಿದೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಅನಗತ್ಯ ವಿಷಯಗಳನ್ನು ಎಳೆದು ತರುತ್ತಿದೆ. ಇದರ ಭಾಗವಾಗಿ ಸನಾತನ ಧರ್ಮ ಕುರಿತು ಮಾತನಾಡುತ್ತಿದ್ದಾರೆ. ಆ ಮೂಲಕ ಅಲ್ಪಸಂಖ್ಯಾತರನ್ನು ಓಲೈಸುವುದು ಡಿಎಂಕೆ ತಂತ್ರವಾಗಿದೆ’ ಎಂದಿದ್ದಾರೆ.
‘ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ಕೋಮುವಾದಿ ಪಕ್ಷಗಳಾಗಿವೆ. ಹೀಗಾಗಿ ತಮಿಳುನಾಡು ಮತ್ತು ದೇಶದಲ್ಲಿ ಸಮುದಾಯಗಳ ನಡುವೆ ಅಶಾಂತಿ ಸೃಷ್ಟಿಸುತ್ತಿವೆ. ಕೋಮುವಾದಿ ಪಕ್ಷವಲ್ಲದ ಬಿಜೆಪಿ ಎಲ್ಲಾ ಧರ್ಮದವರಿಗೂ ಸೇರಿದ್ದಾಗಿದೆ’ ಎಂದು ತಿರುಪತಿ ಹೇಳಿದ್ದಾರೆ.
ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರು ಇತ್ತೀಚೆಗೆ ಸನಾತನ ಧರ್ಮವನ್ನು ಮಲೇರಿಯಾ ಹಾಗೂ ಡೆಂಗಿಗೆ ಹೋಲಿಸಿ, ಅದರ ನಿರ್ಮೂಲನೆ ಅಗತ್ಯ ಎಂದಿದ್ದರು. ಇದು ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಇದೇ ವಿಷಯವಾಗಿ ರಾಜಾ ಅವರೂ ಸತನಾನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.