ಚೆನ್ನೈ: ‘ಕಾಂಗ್ರೆಸ್ ಮತ್ತು ಡಿಎಂಕೆ ಹಳತಾದ 2ಜಿ ಕ್ಷಿಪಣಿಯನ್ನು ಉಡಾವಣೆ ಮಾಡಿವೆ. ಅವರ ಗುರಿ ತಮಿಳುನಾಡಿನ ಮಹಿಳೆಯರು. ಅವರು ತಮಿಳುನಾಡಿನ ನಾರಿ ಶಕ್ತಿಯ ಮೇಲೆ ದಾಳಿಮಾಡಲು ಬಯಸುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆರೋಪಿಸಿದ್ದಾರೆ.
ತಮಿಳುನಾಡಿನ ಧಾರಾಪುರಂನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಡಿಎಂಕೆ ನಾಯಕ ಎ. ರಾಜಾ ಅವರು ಮುಖ್ಯಮಂತ್ರಿ ಪಳನಿಸ್ವಾಮಿ ತಾಯಿಯ ಕುರಿತು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಮತ್ತು ಡಿಎಂಕೆಗಳು ಪಳನಿಸ್ವಾಮಿ ಅವರ ತಾಯಿಯನ್ನು ಅವಮಾನಿಸಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ರಾಜ್ಯದ ಇನ್ನಷ್ಟು ಮಹಿಳೆಯರನ್ನು ಅವಮಾನಿಸುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ತಮ್ಮ ದೃಷ್ಟಿಕೋನದ ಬಗ್ಗೆ ಅಷ್ಟೇನೂ ಮಾತನಾಡುವುದಿಲ್ಲ. ಇತರರನ್ನು ಕೀಳಾಗಿ ಕಾಣುತ್ತಾರೆ ಎಂದು ಮೋದಿ ಹೇಳಿದ್ದಾರೆ.
ಕೆಲವೇ ದಿನಗಳಲ್ಲಿ ತಮಿಳುನಾಡು ಹೊಸ ವಿಧಾನಸಭೆಯನ್ನು ಆರಿಸಲಿದೆ. ರಾಜ್ಯದಲ್ಲಿ ಜನರ ಸೇವೆ ಮಾಡುವುದಕ್ಕಾಗಿ ಎನ್‌ಡಿಎಯು ನಿಮ್ಮ ಆಶೀರ್ವಾದ ಬಯಸುತ್ತಿದೆ. ಎಂಜಿಆರ್ ಮತ್ತು ಅಮ್ಮ ಜಯಲಲಿತಾ ಅವರಿಂದ ಪ್ರೇರಿತವಾದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿಮ್ಮ ಮತ ಯಾಚಿಸುತ್ತಿದ್ದೇವೆ ಎಂದು ಮೋದಿ ಮನವಿ ಮಾಡಿದ್ದಾರೆ.
ತಮಿಳುನಾಡಿನ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ನಾವು ಬಯಸುತ್ತಿದ್ದೇವೆ. ಅದಕ್ಕಾಗಿಯೇ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದೂ ಪ್ರಧಾನಿ ಹೇಳಿದ್ದಾರೆ.
ತಮಿಳುನಾಡಿನ ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಸಬಲೀಕರಣವನ್ನು ಬಿಜೆಪಿ ಬಯಸುತ್ತಿದೆ. ಎನ್‌ಡಿಎಗೆ ಮತ ನೀಡುವುದೆಂದರೆ ದೀರ್ಘಕಾಲೀನ ಸಮಸ್ಯೆಗಳ ಪರಿಹಾರಕ್ಕೆ ಮುಂದಡಿಯಿಟ್ಟಂತೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.