ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಕೋವಿಡ್ ನಿಯಮಗಳಿಗೆ ಬದ್ಧವಾಗಿ ನಡೆದ ಕಾರ್ಯಕ್ರಮದಲ್ಲಿ, 33 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಇಲ್ಲಿನ ರಾಜಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ನೂತನ ಮುಖ್ಯಮಂತ್ರಿ ಮತ್ತು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. 33 ಶಾಸಕರಲ್ಲಿ 15 ಮಂದಿ ಇದೇ ಮೊದಲ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಳಿದಂತೆ ಸ್ಟಾಲಿನ್ ಸಂಪುಟಕ್ಕೆ ಸೇರ್ಪಡೆಯಾದ 18 ಶಾಸಕರಿಗೆ ಈ ಹಿಂದೆ ಸಚಿವ ಸ್ಥಾನ ನಿಭಾಯಿಸಿದ ಅನುಭವ ಇದೆ.
ಸ್ಟಾಲಿನ್ ಅವರೂ ಸೇರಿ 34 ಮಂದಿ ಇರುವ ಸಂಪುಟದಲ್ಲಿ ಮಹಿಳೆಯರ ಸಂಖ್ಯೆ ಎರಡು ಮಾತ್ರ. ಪಿ.ಗೀತಾ ಜೀವನ್ ಅವರಿಗೆ ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಇಲಾಖೆ ಮತ್ತು ಎನ್.ಕಾಯಲ್‌ವಿಳಿ ಸೆಲ್ವರಾಜ್ ಅವರಿಗೆ ಆದಿ ದ್ರಾವಿಡ ಕಲ್ಯಾಣ ಇಲಾಖೆಯ ಹೊಣೆಗಾರಿಕೆ ನೀಡಲಾಗಿದೆ. ಇವರಲ್ಲಿ ಗೀತಾ ಅವರು ಈ ಹಿಂದಿನ ಡಿಎಂಕೆ ಸರ್ಕಾರದಲ್ಲಿ ಸಚಿವೆಯಾಗಿದ್ದರು. ಕಾಯಲ್‌ವಿಳಿ ಸೆಲ್ವರಾಜ್ ಅವರು ಇದೇ ಮೊದಲ ಬಾರಿ ಸಂಪುಟ ಪ್ರವೇಶಿಸಿದ್ದಾರೆ.
ಸ್ಟಾಲಿನ್ ಅವರು ಕೆಲವು ಪ್ರಮುಖ ಖಾತೆಗಳ ಹೆಸರುಗಳನ್ನು ಬದಲಿಸಿದ್ದಾರೆ. ಒಂದು ಹೊಸ ಇಲಾಖೆಯನ್ನು ರಚಿಸಿ
ದ್ದಾರೆ. ಕೃಷಿ ಇಲಾಖೆಯನ್ನು, ‘ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ’ ಎಂದು ಮರುನಾಮಕರಣ ಮಾಡಲಾಗಿದೆ. ಪರಿಸರ ಇಲಾಖೆಯನ್ನು, ‘ಪರಿಸರ ಮತ್ತು ಹವಾಮಾನ ವೈಪರೀತ್ಯ ಇಲಾಖೆ’ ಎಂದು ಮರುನಾಕರಣ ಮಾಡಲಾಗಿದೆ. ಅನಿವಾಸಿ ತಮಿಳರ ಕಲ್ಯಾಣ ಇಲಾಖೆಯನ್ನು ಹೊಸದಾಗಿ ರಚಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಿ.ಕೆ.ಎಸ್.ಮಸ್ತಾನ್ ಅವರು ಅನಿವಾಸಿ ತಮಿಳರ ಕಲ್ಯಾಣ ಇಲಾಖೆಯ ಹೊಣೆಯನ್ನೂ ಹೊತ್ತಿದ್ದಾರೆ.
₹2,000 ಕೋವಿಡ್ ಪ್ಯಾಕೇಜ್: ಉಚಿತ ಅಕ್ಕಿ ಪಡೆಯುವ ಅರ್ಹತೆ ಇರುವ ರಾಜ್ಯದ ಎಲ್ಲಾ ಪಡಿತರ ಚೀಟಿ
ದಾರರಿಗೆ ₹2,000 ನಗದು ಕೋವಿಡ್ ಪ್ಯಾಕೇಜ್ ಅನ್ನು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.
‘ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ₹4,000 ನಗದು ಕೋವಿಡ್ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದೆವು. ಅದರಲ್ಲಿ ಮೊದಲ ಕಂತಿನ ಭಾಗವಾಗಿ ₹2,000ವನ್ನು ಮೇ ತಿಂಗಳ ಒಳಗೇ ನೀಡಲಾಗುತ್ತದೆ. 2.07 ಕೋಟಿ ಪಡಿತರ ಚೀಟಿದಾರರು ಈ ಪ್ಯಾಕೇಜ್ ಪಡೆಯಲಿದ್ದಾರೆ. ಇದಕ್ಕಾಗಿ ₹4,153 ಕೋಟಿ ವೆಚ್ಚ ಮಾಡಲಾಗುತ್ತದೆ’ ಎಂದು ಸ್ಟಾಲಿನ್ ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ.
ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ರಾಜ್ಯ ಹಾಲು ಉತ್ಪಾದಕರ ಸಹಕಾರ ಮಂಡಳಿಯ ಹಾಲಿನ ದರವನ್ನು, ಪ್ರತಿ ಲೀಟರ್‌ಗೆ ₹3ರಂತೆ ಕಡಿಮೆ ಮಾಡಿದ್ದಾರೆ. ರಾಜ್ಯದ ಎಲ್ಲೆಡೆ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರವನ್ನು ಘೋಷಿಸಿದ್ದಾರೆ. ಇದು ನಗರ ಸಂಚಾರ ಬಸ್‌ಗಳಿಗೆ ಮಾತ್ರ ಅನ್ವಯವಾಗಲಿದ್ದು, ಶನಿವಾರದಿಂದಲೇ ಜಾರಿಯಾಗಲಿದೆ.
ಅಧಿಕಾರಕ್ಕೆ ಬಂದ 100 ದಿನದಲ್ಲಿ ಎಲ್ಲರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಘೋಷಿಸಲಾಗಿತ್ತು. ಇದಕ್ಕಾಗಿ, ‘ನಿಮ್ಮ ಕ್ಷೇತ್ರದಲ್ಲಿ ಮುಖ್ಯಮಂತ್ರಿ’ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದನ್ನು ಜಾರಿಗೆ ತರುವ ಉದ್ದೇಶದಿಂದ ಐಎಎಸ್ ಅಧಿಕಾರಿ ನೇತೃತ್ವದ ಪ್ರತ್ಯೇಕ ವಿಭಾಗವೊಂದನ್ನು ರಚಿಸಲು ಸರ್ಕಾರವು ಅನುಮತಿ ನೀಡಿದೆ. ಈ ವಿಭಾಗದ ಹೊಣೆಯನ್ನು ಕರ್ನಾಟಕ ಮೂಲಕ ಐಎಸ್ ಅಧಿಕಾರಿ ಶಿಲ್ಪಾ ಪ್ರಭಾಕರ್ ಅವರಿಗೆ ವಹಿಸಲಾಗಿದೆ.
ಗಾಂಧಿ, ನೆಹರೂ ಮತ್ತು ಸ್ಟಾಲಿನ್
ತಮಿಳುನಾಡಿನ ನೂತನ ವಿಧಾನಸಭೆಯಲ್ಲಿ ಇಬ್ಬರು ಗಾಂಧಿಗಳಿದ್ದಾರೆ. ಒಬ್ಬ ನೆಹರೂ ಇದ್ದಾರೆ. ಒಬ್ಬ ಸ್ಟಾಲಿನ್ ಸಹ ಇದ್ದಾರೆ. ಇವರಲ್ಲಿ ಒಬ್ಬ ಗಾಂಧಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ಸಂಪುಟದ ಸದಸ್ಯರಾಗಿದ್ದಾರೆ.
ರಾಜಕೀಯ ಸಿದ್ಧಾಂತ, ಸಾಮಾಜಿಕ ಚಳವಳಿಗಳ ನೇತಾರರ ಕಡೆಗಿನ ತಮಿಳರ ಒಲವು, ಅವರ ಹೆಸರಿನಲ್ಲೂ ಪ್ರತಿಬಿಂಬಿಸುತ್ತದೆ. ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ, ತಮಿಳುನಾಡಿನಲ್ಲಿ ‘ಬೋಸ್’ ಎಂಬ ಹೆಸರು ಜನಪ್ರಿಯವಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣೆಗಾಗಿ ಸಾವಿರಾರು ಜನರು ತಮ್ಮ ಮಕ್ಕಳಿಗೆ ಬೋಸ್ ಎಂದು ಹೆಸರಿಟ್ಟಿದ್ದರು. ಇದೇ ರೀತಿ ತಮಿಳರು ತಮ್ಮ ಮಕ್ಕಳಿಗೆ ಗಾಂಧಿ, ನೆಹರೂ ಮತ್ತು ಜವಾಹರ್ ಎಂದೂ ಹೆಸರಿಟ್ಟ ಸಾವಿರಾರು ಉದಾಹರಣೆಗಳಿವೆ.
ತಮ್ಮ ಮಗನಿಗೆ ಸ್ಟಾಲಿನ್ ಎಂದು ಹೆಸರು ಇರಿಸಲು ಕಮ್ಯುನಿಸ್ಟ್ ಸಿದ್ಧಾಂತದ ಬಗೆಗಿನ ತಮ್ಮ ಒಲವೇ ಕಾರಣ ಎಂದುಡಿಎಂಕೆಯ ಹಿಂದಿನ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಹೇಳಿದ್ದರು. ಈಗಿನ ಮುಖ್ಯಮಂತ್ರಿ ಸ್ಟಾಲಿನ್ ಜನಿಸಿದ್ದು 1953ರ ಮಾರ್ಚ್ 1ರಂದು. ಯುಎಸ್‌ಎಸ್‌ಆರ್ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ಅವರು 1953ರ ಮಾರ್ಚ್ 5ರಂದು ನಿಧನರಾಗಿದ್ದರು. ಹೀಗಾಗಿ ತಮ್ಮ ಮಗನಿಗೆ ಸ್ಟಾಲಿನ್ ಎಂದು, ಕರುಣಾನಿಧಿ ಅವರು ನಾಮಕರಣ ಮಾಡಿದ್ದರು.
ಡಿಎಂಕೆ ಶಾಸಕರಾದ ಆರ್.ಗಾಂಧಿ ಅವರು ಈ ಸಂಪುಟದಲ್ಲಿ ಕೈಮಗ್ಗ ಮತ್ತು ಜವಳಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಹಾತ್ಮ ಗಾಂಧಿ ಅವರ ಸ್ಮರಣೆಗಾಗಿಯೇ ಅವರಿಗೆ ಗಾಂಧಿ ಎಂದು ನಾಮಕರಣ ಮಾಡಲಾಗಿತ್ತಂತೆ. ಪಕ್ಷದ ಹಿರಿಯ ಮತ್ತು ಪ್ರಭಾವಿ ನಾಯಕರಾದ ಕೆ.ಎನ್.ನೆಹರೂ ಅವರು ನಗರಾಡಳಿತ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
‘ಗಾಂಧಿ ಮತ್ತು ನೆಹರೂ ಅವರು ಈಗ ಸ್ಟಾಲಿನ್ (ರಷ್ಯಾ ಕಮ್ಯುನಿಸ್ಟ್) ಅವರ ಅಡಿಯಲ್ಲಿ ಕೆಲಸ ಮಾಡಬೇಕಿದೆ’ ಎಂಬ ಮೀಮ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು ತಮಿಳುನಾಡು ವಿಧಾನಸಭೆಗೆ ರಾಜ್ಯದ ಮತ್ತೊಬ್ಬ ಪ್ರಭಾವಿ ನಾಯಕ ಎಂ.ಆರ್.ಗಾಂಧಿ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.
ರಂಗಸ್ವಾಮಿ ಅಧಿಕಾರ ಸ್ವೀಕಾರ
ಪುದುಚೇರಿ (ಪಿಟಿಐ): ಪುದುಚೇರಿ ಕೇಂದ್ರಾಡಳಿತ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಎನ್.ಆರ್. ಕಾಂಗ್ರೆಸ್ ಮುಖ್ಯಸ್ಥ ಎನ್.ರಂಗಸ್ವಾಮಿ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಎನ್.ಆರ್. ಕಾಂಗ್ರೆಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಸಂಪುಟದ ಸದಸ್ಯರನ್ನು ಒಂದೆರಡು ದಿನಗಳಲ್ಲಿ ಆಯ್ಕೆ ಮಾಡಲಾಗುತ್ತದೆ.
ಸಮ್ಮಿಶ್ರ ಸರ್ಕಾರದಲ್ಲಿ ಎನ್.ಆರ್. ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಮೂವರು ಸಚಿವರು ಇರಲಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಗೆ ಬಿಟ್ಟುಕೊಡಲಾಗುತ್ತದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.